ಮಹಾ ಕುಂಭಮೇಳ ಕಾಲ್ತುಳಿತ ಪ್ರಕರಣ | ಉತ್ತರ ಪ್ರದೇಶ ಸರಕಾರವು ಸಾವುಗಳ ನಿಖರ ಸಂಖ್ಯೆಯನ್ನು ಬಚ್ಚಿಟ್ಟಿದೆ: ಅಖಿಲೇಶ್ ಯಾದವ್ ಆರೋಪ

ಅಖಿಲೇಶ್ ಯಾದವ್ | PTI
ಹೊಸದಿಲ್ಲಿ: ಉತ್ತರ ಪ್ರದೇಶ ಸರಕಾರವು ಮೃತರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸುವುದನ್ನು ತಪ್ಪಿಸಲು ಮಹಾ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಸಾವುಗಳ ನಿಖರವಾದ ಸಂಖ್ಯೆಯನ್ನು ಬಚ್ಚಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಆರೋಪಿಸಿದ್ದಾರೆ.
ಶುಕ್ರವಾರ ಬಜೆಟ್ ಅಧಿವೇಶನಕ್ಕೆ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯೋಗಿ ಆದಿತ್ಯನಾಥ ಸರಕಾರವು ದುರಂತದ ತೀವ್ರತೆ ಕುರಿತು ಮಾಹಿತಿಯನ್ನು ಮರೆ ಮಾಚುತ್ತಿದೆ ಎಂದೂ ಆರೋಪಿಸಿದರು.
ಉ.ಪ್ರದೇಶ ಸರಕಾರ ಮತ್ತು ಮುಖ್ಯಮಂತ್ರಿ ನೈತಿಕವಾಗಿ ಮತ್ತು ರಾಜಕೀಯವಾಗಿಯೂ ವಿಫಲಗೊಂಡಿದ್ದಾರೆ. ಪರಿಹಾರವನ್ನು ಪಾವತಿಸುವುದರಿಂದ ನುಣುಚಿಕೊಳ್ಳಲು ಸರಕಾರವು ಸಾವುಗಳ ಸಂಖ್ಯೆಯನ್ನು ಬಚ್ಚಿಟ್ಟಿದೆ. ಅದು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಯಸುತ್ತಿದೆ. ಇಲ್ಲಿ ಯಾವುದೇ ಪಿತೂರಿ ನಡೆದಿಲ್ಲ,ದುರಂತ ಸಂಭವಿಸಿದ್ದಕ್ಕೆ ಸರಕಾರದ ವೈಫಲ್ಯ ಕಾರಣವಾಗಿದೆ. ಸಂತರು ಸಹ ಯೋಗಿ ಆದಿತ್ಯನಾಥ ಸುಳ್ಳುಗಾರ ಎಂದು ಹೇಳುತ್ತಿದ್ದಾರೆ ಎಂದರು.
ಬುಧವಾರ ಮೌನಿ ಅಮವಾಸ್ಯೆಯಂದು ನಸುಕಿನಲ್ಲಿ ಮಹಾ ಕುಂಭಮೇಳದ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಸ್ನಾನಕ್ಕಾಗಿ ಕೋಟ್ಯಂತರ ಭಕ್ತರು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದ್ದು,ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿದ್ದರು. ಆದರೆ 18 ಗಂಟೆಗಳಷ್ಟು ವಿಳಂಬವಾಗಿ ಸರಕಾರವು 30 ಜನರು ಮಾತ್ರ ಸಾವನ್ನಪ್ಪಿದ್ದಾರೆ ಮತ್ತು 60ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿತ್ತು.
ಪಾರದರ್ಶಕತೆಗೆ ಕರೆ ನೀಡಿದ ಯಾದವ,ಮೃತರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಮತ್ತು ಅವರ ಕುಟುಂಬಗಳಿಗೆ ಶೀಘ್ರ ಮಾಹಿತಿಯನ್ನು ಒದಗಿಸುವಂತೆ ಉತ್ತರ ಪ್ರದೇಶ ಸರಕಾರವನ್ನು ಆಗ್ರಹಿಸಿದರು.