ಮಹಾ ಕುಂಭ ಮೇಳದ ಸಂದರ್ಭ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿತ್ತು: ಸಿಪಿಸಿಬಿ ವರದಿ

PC : PTI
ಹೊಸದಿಲ್ಲಿ: ಅಂಕಿ-ಅಂಶ ವಿಶ್ಲೇಷಣೆ ಪ್ರಕಾರ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಇತ್ತೀಚೆಗೆ ಅಂತ್ಯಗೊಂಡ ಮಹಾಕುಂಭ ಮೇಳದ ಸಂದರ್ಭ ತ್ರಿವೇಣಿ ಸಂಗಮದಲ್ಲಿ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಸಲ್ಲಿಸಿದ ನೂತನ ವರದಿಯಲ್ಲಿ ಹೇಳಿದೆ.
ಮಂಡಳಿಯು ಗಂಗಾ ನದಿಯ ಐದು ಸ್ಥಳಗಳಲ್ಲಿ ಹಾಗೂ ಯಮುನಾ ನದಿಯ ಎರಡು ಸ್ಥಳಗಳಲ್ಲಿ ಪುಣ್ಯ ಸ್ನಾನದ ದಿನಗಳು ಸೇರಿದಂತೆ ಜನವರಿ 12ರಿಂದ ವಾರದಲ್ಲಿ ಎರಡು ಬಾರಿ ನೀರಿನ ಗುಣಮಟ್ಟವನ್ನು ಪರಿಶೀಲನೆ ನಡೆಸಿದೆ ಎಂದು ಫೆಬ್ರವರಿ 28ರ ದಿನಾಂಕದ ಹಾಗೂ ಮಾರ್ಚ್ 7ರಂದು ನ್ಯಾಯಾಧೀಕರಣದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ವರದಿ ಹೇಳಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಹಾಕುಂಭ ಮೇಳದ ಸಂದರ್ಭ ಪ್ರಯಾಗ್ರಾಜ್ನ ವಿವಿಧ ಸ್ಥಳಗಳಲ್ಲಿ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿರಲಿಲ್ಲ. ಈ ನೀರಿನಲ್ಲಿ ಮಲ ಬ್ಯಾಕ್ಟೀರಿಯಾಗಳ ಪ್ರಮಾಣ ಅತ್ಯಧಿಕವಾಗಿತ್ತು ಎಂದು ನ್ಯಾಯಾಧಿಕರಣಕ್ಕೆ ಫೆಬ್ರವರಿ 17ರಂದು ಸಲ್ಲಿಸಿದ್ದ ವರದಿಯಲ್ಲಿ ಹೇಳಿತ್ತು.
►ಗಂಗಾ ನದಿ ನೀರಿನ ಸ್ವಚ್ಛತೆಯ ಬಗ್ಗೆ ರಾಜ್ ಠಾಕ್ರೆ ಪ್ರಶ್ನೆ
ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್)ಯ ವರಿಷ್ಠ ರಾಜ್ ಠಾಕ್ರೆ ಶನಿವಾರ ಗಂಗಾ ನದಿ ನೀರಿನ ಸ್ವಚ್ಛತೆ ಕುರಿತು ಪ್ರಶ್ನೆ ಎತ್ತಿದ್ದಾರೆ.
ದೇಶದಲ್ಲಿರುವ ಯಾವುದೇ ನದಿ ಸ್ವಚ್ಛವಾಗಿಲ್ಲ ಎಂದು ಅವರು ಹೇಳಿದ್ದಾರೆ. ತನ್ನ ಪಕ್ಷದ 19ನೇ ಸ್ಥಾಪನಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಠಾಕ್ರೆ ಮಾತನಾಡಿದರು.
ತನ್ನ ಪಕ್ಷದ ನಾಯಕ ಬಾಲ ನಂದಗಾಂವ್ಕರ್ ಅವರು ಮಹಾ ಕುಂಭ ಮೇಳದಿಂದ ಪವಿತ್ರ ನೀರು ತಂದಿದ್ದಾರೆ. ಆದರೆ, ನಾನು ಅದನ್ನು ಕುಡಿಯಲು ನಿರಾಕರಿಸಿದೆ.
‘‘ಗಂಗಾ ನದಿ ನೀರಿನ ಕುರಿತು ನಾನು ಸಾಮಾಜಿಕ ಮಾಧ್ಯಮದಲ್ಲಿ ಹಲವು ವೀಡಿಯೊಗಳನ್ನು ನೋಡಿದೆ. ನದಿ ನೀರಿನಲ್ಲಿ ಕೆಲವರು ಕೆರೆದುಕೊಳ್ಳುತ್ತಿರುವುದು ಹಾಗೂ ಬಟ್ಟೆ ಒಗೆಯುತ್ತಿರುವುದನ್ನು ನಾನು ನೋಡಿದೆ’’ ಎಂದು ಅವರು ಹೇಳಿದ್ದಾರೆ.