ಮಹಾಕುಂಭ ಮೇಳ ಕಾಲ್ತುಳಿತ: ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದ ಸಿಎಂ ಆದಿತ್ಯನಾಥ್

ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (Photo: ANI)
ಲಕ್ನೋ : ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಲ್ಲಿ ಸಾವು- ನೋವುಗಳು ಸಂಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಆದಿತ್ಯನಾಥ್ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಭಕ್ತರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.
ಇಡೀ ಕುಂಭ ಪ್ರದೇಶದಲ್ಲಿ ಘಾಟ್ ಗಳನ್ನು ನಿರ್ಮಿಸಲಾಗಿದೆ. ಭಕ್ತರು ತ್ರಿವೇಣಿ ಸಂಗಮದ ಕಡೆಗೆ ಹೋಗುವ ಅಗತ್ಯವಿಲ್ಲ. ಭಕ್ತರು ತಮ್ಮ ಹತ್ತಿರದ ಘಾಟ್ ಗಳಲ್ಲಿ ಪವಿತ್ರ ಸ್ನಾನ ಮಾಡಬೇಕು. ಇಂದು ಪ್ರಯಾಗ್ ರಾಜ್ ನಲ್ಲಿ ಸುಮಾರು 8ರಿಂದ 10 ಕೋಟಿ ಭಕ್ತರು ಸೇರಿದ್ದು, ಸಂಗಮದಲ್ಲಿ ಮಿಂದೇಳಲು ಅಪಾರ ಭಕ್ತಸಾಗರವೇ ಪ್ರಯಾಗ್ ರಾಜ್ ನಲ್ಲಿ ಜಮಾಯಿಸಿದೆ. ಮಹಾಕುಂಭಮೇಳದ ಎರಡನೇ ‘ಪವಿತ್ರ ಸ್ನಾನ’ ಇದಾಗಿದೆ. ಅಖಾರ ಮಾರ್ಗದಲ್ಲಿ ಬ್ಯಾರಿಕೇಡಿಂಗ್ ದಾಟಲು ಯತ್ನಿಸಿದಾಗ ಕೆಲವು ಭಕ್ತರಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಭಕ್ತಾದಿಗಳ ಅನುಕೂಲಕ್ಕೆ ರೈಲ್ವೆಯು ಪ್ರಯಾಗರಾಜ್ ಪ್ರದೇಶದ ವಿವಿಧ ನಿಲ್ದಾಣಗಳಲ್ಲಿ ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಿದೆ. ಕಾಲ್ತುಳಿತಕ್ಕೆ ಸಂಬಂಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಕಾರ್ಯದರ್ಶಿ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರೊಂದಿಗೆ ಸಭೆ ನಡೆಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದ್ದೇವೆ ಎಂದು ಹೇಳಿದ್ದಾರೆ.