ಮಹಾರಾಷ್ಟ್ರ | ಮತಯಂತ್ರಗಳ ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ 104 ಅಭ್ಯರ್ಥಿಗಳು!
ಚುನಾವಣಾ ಆಯೋಗ | PTI
ಮುಂಬೈ: ಮಹಾಯುತಿ ಮೈತ್ರಿಕೂಟದ ವಿರುದ್ಧ ಪ್ರತಿಪಕ್ಷಗಳು ಇವಿಎಂ ದುರ್ಬಳಕೆ ಆರೋಪ ಮಾಡುತ್ತಿರುವ ಮಧ್ಯೆ 95 ವಿಧಾನಸಭಾ ಕ್ಷೇತ್ರಗಳ 104 ಪರಾಜಿತ ಅಭ್ಯರ್ಥಿಗಳು EVM ಮತ್ತು VVPAT ಗಳನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಚಲಾವಣೆಯಾದ ಮತಗಳ ಸಂಖ್ಯೆ ಮತ್ತು ಎಣಿಸಿದ ಮತಗಳ ಅಂಕಿ-ಅಂಶಗಳು ಒಂದೇ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಮತಯಂತ್ರಗಳ ಪರಿಶೀಲನೆಗೆ ಆಗ್ರಹಿಸಿ ಅರ್ಜಿ ಸಲ್ಲಿಸಿದವರಲ್ಲಿ ಬಾಳಾ ಸಾಹೇಬ್ ಥೋರಟ್, ಆರಿಫ್ ನಸೀಮ್ ಖಾನ್, ಮಾಣಿಕ್ರಾವ್ ಠಾಕ್ರೆ ಮತ್ತು ಶ್ರದ್ಧಾ ಜಾಧವ್ ಸೇರಿದ್ದಾರೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿನ ಶೇ.5 ರಷ್ಟು ಮತಗಟ್ಟೆಗಳಲ್ಲಿ ಪ್ರತಿ ಬೂತ್ಗೆ 40,000 ಶುಲ್ಕವಾಗಿ ಪಾವತಿಸಿ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಥೋರಟ್, ಖಾನ್, ಠಾಕ್ರೆ ಮತ್ತು ಜಾಧವ್ ಅವರು ಪರಿಶೀಲನಾ ವೆಚ್ಚದ ಠೇವಣಿಯಾಗಿ ರಾಜ್ಯದ ಬೊಕ್ಕಸಕ್ಕೆ 3.2 ಕೋಟಿ ರೂ. ಪಾವತಿಸಿದ್ದಾರೆ ಎನ್ನಲಾಗಿದೆ.
ಚುನಾವಣಾ ಆಯೋಗವು 31 ಜಿಲ್ಲೆಗಳ 755 ಬೂತ್ ಗಳಲ್ಲಿ ಪರಿಶೀಲನೆಗಾಗಿ 104 ಅರ್ಜಿಗಳನ್ನು ಸ್ವೀಕರಿಸಿದೆ. ಸಿಂಧುದುರ್ಗ, ನಂದೂರ್ಬಾರ್, ಅಮರಾವತಿ, ವಾರ್ಧಾ ಮತ್ತು ಗಡ್ಚಿರೋಲಿ ಜಿಲ್ಲೆಗಳಿಂದ ಯಾವುದೇ ಅರ್ಜಿಗಳು ಸಲ್ಲಿಸಲಾಗಿಲ್ಲ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾ ಅಧಿಕಾರಿ ಕಿರಣ್ ಕುಲಕರ್ಣಿ, ಫಲಿತಾಂಶದಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಅಭ್ಯರ್ಥಿಗಳು ತಮ್ಮ ಕ್ಷೇತ್ರದ 5% ಬೂತ್ಗಳಲ್ಲಿ ಪರಿಶೀಲನೆಯನ್ನು ಕೇಳಬಹುದು ಎಂದು ಹೇಳಿದ್ದಾರೆ. ರಾಜ್ಯದ ಒಟ್ಟು 1,00,486 ಬೂತ್ಗಳಲ್ಲಿ 755 ಬೂತ್ಗಳಲ್ಲಿ ನಾವು ಪರಿಶೀಲನೆ ಅಥವಾ ಅಣಕು ಮತದಾನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
ಕೆಲವು ಅರ್ಜಿದಾರರು ತಮ್ಮ ಅರ್ಜಿಗಳನ್ನು ಹಿಂಪಡೆಯಲು ಮತ್ತು ಅವರ ಠೇವಣಿ ಮೊತ್ತವನ್ನು ವಾಪಾಸ್ಸು ನೀಡುವಂತೆ ಆಗ್ರಹಿಸಿದ್ದಾರೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾದ ಏಳು ದಿನಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಮತ್ತು ಅಣಕು ಮತದಾನಕ್ಕೆ ಮೂರು ದಿನಗಳ ಮೊದಲು ಅರ್ಜಿಗಳನ್ನು ಹಿಂಪಡೆಯಬಹುದು. ಚುನಾವಣೆಯ 45 ದಿನಗಳ ನಂತರ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇವಿಎಂ, ವಿವಿಪ್ಯಾಟ್ ಗಳ ಪರಿಶೀಲನೆ ನಡೆಸುವಂತೆ ಹೆಚ್ಚಿನ ಅರ್ಜಿಗಳು ಪುಣೆಯಿಂದ ಬಂದಿದ್ದು, ಅರ್ಜಿದಾರರು ಪುಣೆಯ 137 ಬೂತ್ಗಳಲ್ಲಿ ಪರಿಶೀಲನೆಗೆ ಒತ್ತಾಯಿಸಿದ್ದಾರೆ. ಮುಂಬೈನಲ್ಲಿ 64 ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ಗಳ ಪರಿಶೀಲನೆಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಾಂಗ್ರೆಸ್ನ ಚಾಂಡಿವಾಲಿ ಅಭ್ಯರ್ಥಿ ಆರಿಫ್ ನಸೀಮ್ ಖಾನ್ 20 ಬೂತ್ಗಳಲ್ಲಿ ಪರಿಶೀಲನೆಗೆ ಒತ್ತಾಯಿಸಿದರೆ, ಕುರ್ಲಾದ ಶಿವಸೇನಾ (ಯುಬಿಟಿ) ಅಭ್ಯರ್ಥಿ ಪ್ರವೀಣ ಮೊರಾಜ್ಕರ್ 10 ಬೂತ್ ಗಳಲ್ಲಿನ ಇವಿಎಂ-ವಿವಿಪ್ಯಾಟ್ ಗಳ ಪರಿಶೀಲನೆಗೆ ಒತ್ತಾಯಿಸಿದ್ದಾರೆ.