ಮಹಾರಾಷ್ಟ್ರ| ಬೇಡಿಕೆಗಳು ಈಡೇರುವವರೆಗೂ ನನ್ನ ಮೃತದೇಹ ಎತ್ತಬೇಡಿ ಎಂದು ಡೆತ್ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ
ನೀರಾವರಿ ಯೋಜನೆಗಾಗಿ 10 ದಿನಗಳ ಸತ್ಯಾಗ್ರಹ ಮಾಡಿದ್ದ ಪ್ರಶಸ್ತಿ ವಿಜೇತ ರೈತ

ಕೈಲಾಶ್ ಅರ್ಜುನ್ ನಗರೆ | PC : timesofindia.indiatimes.com
ಬುಲ್ಧಾನ/ದ್ಯುಯೆಲ್ ಗಾಂವ್ ರಾಜ: ಗುರುವಾರ ಶಿವ್ನಿ ಅರ್ಮಲ್ ಗ್ರಾಮದಲ್ಲಿರುವ ತಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ರಾಜ್ಯ ಪ್ರಶಸ್ತಿ ವಿಜೇತ ಯುವ ರೈತ ಕೈಲಾಶ್ ಅರ್ಜುನ್ ನಗರೆ (43), “ಜಿಲ್ಲಾಡಳಿತವು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ನನ್ನ ಶವವನ್ನು ಎತ್ತಬೇಡಿ” ಎಂದು ಮೂರು ಪುಟಗಳ ಡೆತ್ನೋಟ್ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಸರಕಾರದಿಂದ 2020ನೇ ಸಾಲಿನ ಯುವ ಕೃಷಿಕ ಪ್ರಶಸ್ತಿ ಸ್ವೀಕರಿಸಿದ್ದ ಕೈಲಾಶ್ ಅರ್ಜುನ್ ನಗರೆ, ಹೋಳಿ ಹಬ್ಬದಂದು ತಮ್ಮ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಬೆಳಗ್ಗೆ ಶಿವ್ನಿ ಅರ್ಮಲ್ ಗ್ರಾಮದಲ್ಲಿರುವ ಅವರ ಹೊಲದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಹಲವಾರು ವರ್ಷಗಳಿಂದ ಖದಕ್ ಪೂರ್ಣ ಜಲಾಶಯದಿಂದ ಸುತ್ತಮುತ್ತಲಿನ 14 ಗ್ರಾಮಗಳಿಗೆ ನೀರಾವರಿಗಾಗಿ ನೀರು ಪೂರೈಸಬೇಕು ಎಂದು ಕೈಲಾಶ್ ಅರ್ಜುನ್ ನಗರೆ ಆಗ್ರಹಿಸುತ್ತಾ ಬಂದಿದ್ದರು. ಕಳೆದ ವರ್ಷ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅವರು 10 ದಿನಗಳ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. ಆದರೆ, ಸರಕಾರದ ನಿಷ್ಕ್ರಿಯತೆಯಿಂದ ಅವರು ಕುಗ್ಗಿ ಹೋಗಿದ್ದರು. ಇದರ ಬೆನ್ನಿಗೇ, ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಕೈಲಾಶ್ ಅರ್ಜುನ್ ನಗರೆ ಜೇಬಿನಲ್ಲಿ, “ಜಿಲ್ಲಾಡಳಿತವು ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ, ನನ್ನ ಶವವನ್ನು ಮೇಲೆತ್ತಬೇಡಿ” ಎಂದು ಮೂರು ಪುಟಗಳ ಡೆತ್ನೋಟ್ ಬರೆದಿರುವುದು ಕಂಡು ಬಂದಿದೆ.
ಕೈಲಾಶ್ ಅರ್ಜುನ್ ನಗರೆ ಈ ಪ್ರಾಂತ್ಯದ ಹೆಸರುವಾಸಿ ರೈತ ನಾಯಕರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ಅವರ ಗ್ರಾಮದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿ, ಸಾವಿರಾರು ರೈತರು ಜಿಲ್ಲಾಡಳಿತದ ವಿರುದ್ಧ ಬೀದಿಗಿಳಿದು ಘೋಷಣೆಗಳನ್ನು ಕೂಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪ್ರಬಲವಾದ ಆಶ್ವಾಸನೆ ನೀಡುವವರೆಗೂ ನಾವು ಕೈಲಾಶ್ ಅರ್ಜುನ್ ನಗರೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂದೂ ಘೋಷಿಸಿದ್ದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡುವಾಗ ಗದ್ಗದಿತರಾಗಿದ್ದ ಮೃತ ಕೈಲಾಶ್ ಅರ್ಜುನ್ ನಗರೆಯ ಪತ್ನಿ ಸುಶೀಲಾ ನಗರೆ, “ಸರಕಾರದ ನಿರ್ಲಕ್ಷ್ಯದಿಂದಾಗಿ ನನ್ನ ಪತಿ ಈ ದುಡುಕು ನಿರ್ಧಾರ ಕೈಗೊಂಡಿದ್ದಾರೆ” ಎಂದು ಆರೋಪಿಸಿದ್ದರು. “ಅವರು ರೈತರ ಹಕ್ಕುಗಳಿಗಾಗಿ ಹೋರಾಡಿದ್ದರು. ಆದರೆ, ಜಿಲ್ಲಾಡಳಿತ ಏನೂ ಮಾಡಲಿಲ್ಲ. ಒಂದು ವೇಳೆ ಅವರು ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿದ್ದರೆ, ಅವರಿಂದಿಗೂ ಜೀವಂತವಿರುತ್ತಿದ್ದರು” ಎಂದೂ ಅವರು ದೂರಿದ್ದರು.