ಮಹಾರಾಷ್ಟ್ರ : ಶಿರಡಿಗೆ ತೆರಳುತ್ತಿದ್ದ ಕಾರು ಟ್ರಕ್ ಗೆ ಢಿಕ್ಕಿ
ಕಲಬುರಗಿಯ ನಾಲ್ವರು ಯಾತ್ರಿಗಳು ಸಾವು
ಸೋಲ್ಲಾಪುರ (ಮಹಾರಾಷ್ಟ್ರ) : ಶಿರಡಿಗೆ ತೆರಳುತ್ತಿದ್ದ ಕಲಬುರಗಿ ಮೂಲದ ಯಾತ್ರಿಗಳಿದ್ದ ಎಸ್ ಯು ವಿ ಕಾರು ಸೋಲ್ಲಾಪುರದ ಕರ್ಮಲಾ-ಅಹ್ಮದ್ ನಗರ್ ರಸ್ತೆಯಲ್ಲಿ ಬುಧವಾರ ಕಂಟೈನರ್ ಟ್ರಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಮಗು ಸೇರಿದಂತೆ ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಹುಬ್ಬಳ್ಳಿಯ ಶಾರದಾ ಹೀರೆಮಠ (67), ಕಲಬುರಗಿಯ ಜೆಮಿ ದೀಪಕ್ ಹಿರೇಮಠ (38), ಶ್ರೀಧರ್ ಶ್ರೀಶಾಲ್ ಚಂದಗಾ ಕುಂಭಾರ (55) ಹಾಗೂ ಅವರ ಪತ್ನಿ ಶಶಿಕಲಾ (50) ಎಂದು ಗುರುತಿಸಲಾಗಿದೆ.
ಅಹ್ಮದ್ನಗರ್ ಜಿಲ್ಲೆಯ ಶಿರ್ಡಿಯಲ್ಲಿರುವ ಶ್ರೀ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಲು ಕಲಬುರಗಿಯಿಂದ ಸೋಲಾಪುರ ದಾರಿಯಾಗಿ ತೆರಳುತ್ತಿದ್ದ ಸಂದರ್ಭ ಪಂಡೆ ಗ್ರಾಮದ ಸಮೀಪ ಮುಂಜಾನೆ ಸುಮಾರು 6 ಗಂಟೆಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ವೇಗವಾಗಿ ಸಾಗುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಗೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿ ಬಿತ್ತು. ಕಾರಿನ ಒಳಗೆ ಸಿಲುಕಿದವರ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದರು.
ಗಾಯಗೊಂಡ ಆರು ಮಂದಿಯನ್ನು ಕರ್ಮಲಾ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.