ಮಹಾರಾಷ್ಟ್ರ | ಸಹ ಕೈದಿಗಳಿಂದ ಹಲ್ಲೆ ; ಸರಣಿ ಬಾಂಬ್ ಸ್ಫೋಟದ ಆರೋಪಿ ಸಾವು
ಸಾಂದರ್ಭಿಕ ಚಿತ್ರ
ಮುಂಬೈ : ಕೊಲ್ಹಾಪುರದ ಕಲಂಬಾ ಕೇಂದ್ರ ಕಾರಾಗೃಹದಲ್ಲಿ ಸಹ ಕೈದಿಗಳ ಗುಂಪೊಂದು ರವಿವಾರ ನಡೆಸಿದ ಮಾರಣಾಂತಿಕ ದಾಳಿಯಿಂದ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನ ಸ್ನಾನಗೃಹದ ಪ್ರದೇಶದಲ್ಲಿ ಸ್ನಾನ ಮಾಡುವ ಕುರಿತಂತೆ ಸಹ ಕೈದಿಗಳೊಂದಿಗಿನ ವಾಗ್ವಾದ ಹಿನ್ನೆಲೆಯಲ್ಲಿ 59 ವರ್ಷದ ಮುನ್ನಾ ಆಲಿಯಾಸ್ ಮುಹಮ್ಮದ್ ಆಲಿ ಖಾನ್ ಆಲಿಯಾಸ್ ಮನೋಜ್ ಕುಮಾರ್ ಭವರ್ಲಾಲ್ ಗುಪ್ತಾನ ಹತ್ಯೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸರಣಿ ಸ್ಫೋಟದ ಪ್ರಕರಣದಲ್ಲಿ ಖಾನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ.
‘‘ವಾಗ್ವಾದದ ನಡುವೆ ಕೆಲವು ವಿಚಾರಣಾಧೀನ ಕೈದಿಗಳು ಒಳಚರಂಡಿಯನ್ನು ಮುಚ್ಚಿದ್ದ ಕಬ್ಬಿಣದ ಮುಚ್ಚಳವನ್ನು ತೆಗೆದು ಖಾನ್ನ ತಲೆಗೆ ಹೊಡೆದರು. ಇದರಿಂದ ಆತ ಅಲ್ಲೇ ಕುಸಿದು ಬಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಲ್ಲೆ ಎಸಗಿದ ಕೈದಿಗಳನ್ನು ಪ್ರತೀಕ್ ಆಲಿಯಾಸ್ ಪಿಲ್ಯಾ ಸುರೇಶ್ ಪಾಟೀಲ್, ದೀಪಕ್ ನೇತಾಜಿ ಖೋಟ್, ಸಂದೀಪ್ ಶಂಕರ್ ಚವ್ಹಾಣ್, ರಿತುರಾಜ್ ವಿನಾಯಕ್ ಇನಾಮ್ದಾರ್ ಹಾಗೂ ಸೌರಭ್ ವಿಕಾಸ್ ಎಂದು ಗುರುತಿಸಲಾಗಿದೆ.
ಈ ಐವರ ವಿರುದ್ಧ ಕೊಲ್ಲಾಪುರ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1993 ಮಾರ್ಚ್ 12ರಂದು ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದರು ಹಾಗೂ 1 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.