ಮಹಾರಾಷ್ಟ್ರ ವಿಧಾನಸಭಾ ಚುನಾವಣೆ |ಮೈತ್ರಿಕೂಟವನ್ನು ಉಳಿಸಲು ಸಿಎಂ ಏಕನಾಥ್ ಶಿಂದೆ ತ್ಯಾಗ ಮಾಡಬೇಕು : ಬಿಜೆಪಿ ಮುಖ್ಯಸ್ಥ ಕರೆ
ಏಕನಾಥ್ ಶಿಂದೆ | PC: PTI
ಮುಂಬೈ : ಮೈತ್ರಿಕೂಟವನ್ನು ಒಗ್ಗಟ್ಟಾಗಿ ಉಳಿಸಲು ಬಿಜೆಪಿ ತ್ಯಾಗ ಮಾಡಿದಂತೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಕೂಡಾ ಸೀಟು ಹಂಚಿಕೆ ವಿಚಾರದಲ್ಲಿ ತ್ಯಾಗ ಮಾಡಬೇಕು ಎಂದು ಬುಧವಾರ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಕರೆ ನೀಡಿದ್ದಾರೆ.
ಚುನಾವಣಾ ಆಯೋಗವು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಪ್ರಕಟಿಸಿದ ಮರುದಿನ ಅವರಿಂದ ಇಂತಹ ಹೇಳಿಕೆ ಹೊರ ಬಿದ್ದಿದೆ.
ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
“ಮುಖ್ಯಮಂತ್ರಿ ಏಕನಾಥ್ ಶಿಂದೆ ಮುಕ್ತ ಮನಸ್ಸು ಹೊಂದಿರಬೇಕು ಹಾಗೂ ತ್ಯಾಗ ಮಾಡಲು ಸಿದ್ಧವಿರಬೇಕು. ನಾವೂ ಕೂಡಾ ಮೈತ್ರಿಕೂಟವನ್ನು ಒಗ್ಗಟ್ಟಾಗಿಡಲು ತ್ಯಾಗ ಮಾಡಿದ್ದೇವೆ. ನಾವು ಈ ಹಿಂದೆ ಹೊಂದಿದ್ದ ಸ್ಥಾನಗಳಲ್ಲಿ ಮರು ಸ್ಪರ್ಧೆ ಮಾಡಲು ಬಯಸುವುದು ಸಹಜವಾಗಿದೆ” ಎಂದು ಬವಾಂಕುಲೆ ತಿಳಿಸಿದ್ದಾರೆ.
ಮೈತ್ರಿಕೂಟದಲ್ಲಿ ನಾವು ಪ್ರಾಬಲ್ಯ ಹೊಂದಿರುವ ಪಕ್ಷವಾಗಿರುವುದರಿಂದ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಬಯಸುವುದು ಸಹಜವಾಗಿದೆ ಎಂದೂ ಅವರು ಹೇಳಿದ್ದಾರೆ.
“ಮುಖ್ಯಮಂತ್ರಿಯಾಗಿ ಅವರು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸುವುದು ನಿರೀಕ್ಷಿತವಾಗಿದೆ. ಆದರೆ, ಮೈತ್ರಿಕೂಟದೊಳಗಿನ ಬಿಕ್ಕಟ್ಟಿನೊಂದಿಗೆ ಚುನಾವಣೆಗೆ ಹೋಗುವುದು ಫಲದಾಯಕವಲ್ಲ. ನಾವು ಈ ಹಿಂದೆ ಗೆಲುವು ಸಾಧಿಸಿದ್ದ ಸ್ಥಾನಗಳಲ್ಲಿ ಸ್ಪರ್ಧಿಸಲು ನಮಗೆ ಸಾಧ್ಯವಾಗಬೇಕು ಎಂಬುದು ನಮ್ಮ ನಿಲುವಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೇವಲ ಸಂಖ್ಯೆಗಾಗಿ ಸ್ಪರ್ಧಿಸಲು ಹೆಚ್ಚು ಸ್ಥಾನಗಳನ್ನು ಆಗ್ರಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದೂ ಅವರು ಹೇಳಿದ್ದಾರೆ.