ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಬಿಜೆಪಿಯಿಂದ 99 ಅಭ್ಯರ್ಥಿಗಳ ಮೊದಲ ಪಟ್ಟ ಬಿಡುಗಡೆ
ನಾಗಪುರದಿಂದ ಫಡ್ನವೀಸ್ ಸ್ಪರ್ಧೆ, ಮಾಜಿ ಸಿಎಂ ಅಶೋಕ್ ಚವಾಣ್ ಪುತ್ರಿಗೂ ಟಿಕೆಟ್
ಸಾಂದರ್ಭಿಕ ಚಿತ್ರ
ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಜೆಪಿ ರವಿವಾರ ಬಿಡುಗಡೆಗೊಳಿಸಿದ್ದು, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಪಕ್ಷದ ಹಲವಾರು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ 99 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.
ದೇವೇಂದ್ರ ಫಡ್ನವೀಸ್ ಅವರು ನಾಗಪುರ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು ಈ ಕ್ಷೇತ್ರವನ್ನು 2009ರಿಂದ ಪ್ರತಿನಿಧಿಸುತ್ತಾ ಬಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವಂಕುಳೆ ನಾಗಪುರ ಜಿಲ್ಲೆಯ ಕಾಮತಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಹಾಲಿ ಸಚಿವ ಸುಧೀರ್ ಮುಂಗತಿವಾರ್ ಬಲ್ಲಾರ್ಪುರ್ ಹಾಗೂ ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಅವರ ಪುತ್ರ ಸಂತೋಷ್ ಭೋಕಾರ್ದಾನ್ನಿಂದ ಸ್ಪರ್ಧಿಸಲಿದ್ದಾರೆ.
ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ನಿಂದ ಬಿಜೆಪಿಗೆ ಜಿಗಿದ್ದದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರ ಪುತ್ರಿ ಶ್ರೀಜಯಾ ಚವಾಣ್ ಅವರಿಗೆ ಭೋಕರ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಅಶೀಶ್ ಶೆಲಾರ್ ವಾಂಡ್ರೆ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ.
ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದವರಲ್ಲಿ ಬಹುತೇಕ ಮಂದಿ ಹಾಲಿ ಶಾಸಕರೆಂದು ಪಕ್ಷದ ಮೂಲಗಳು ತಿಳಿಸಿವೆ.