ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಪಕ್ಷ ಟಿಕೆಟ್ ನಿರಾಕರಿಸಿದ ಬಳಿಕ ಶಿವಸೇನೆ ಶಾಸಕ ಶ್ರೀನಿವಾಸ್ ವನಗಾ ನಾಪತ್ತೆ
ಶ್ರೀನಿವಾಸ್ ವನಗಾ | PC : X \ @latestly
ಮುಂಬೈ : ಮುಖ್ಯಮಂತ್ರಿ ಏಕನಾಥ ಶಿಂದೆಯವರಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಟಿಕೆಟ್ ನಿರಾಕರಿಸಲ್ಪಟ್ಟಿರುವ ಏಕೈಕ ಶಿವಸೇನೆ ಶಾಸಕ ಶ್ರೀನಿವಾಸ ವನಗಾ(ಪಾಲ್ಘರ್) ಅವರು ಸೋಮವಾರ ಸಂಜೆಯಿಂದ ತನ್ನ ಮನೆಯಿಂದ ನಾಪತ್ತೆಯಾಗಿದ್ದಾರೆ.
ಬಿಜೆಪಿಯ ದಿವಂಗತ ಸಂಸದ ಚಿಂತಾಮಣ ವನಗಾರ ಪುತ್ರರಾಗಿರುವ ಶ್ರೀನಿವಾಸ ವನಗಾ ಕಳೆದ ಹಲವಾರು ಗಂಟೆಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರ ಪೋನ್ಗಳು ಸ್ವಿಚ್ಡ್ ಆಫ್ ಆಗಿವೆ ಎಂದು ಹೇಳಲಾಗಿದೆ.
ಪಕ್ಷವು ತನಗೆ ಟಿಕೆಟ್ ನಿರಾಕರಿಸಿ ಮಾಜಿ ಸಂಸದ ರಾಜೇಂದ್ರ ಗಾವಿತ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ಕಳೆದೆರಡು ದಿನಗಳಿಂದ ವನಗಾ ಅಸಮಾಧಾನದಲ್ಲಿದ್ದರು ಎಂದು ಅವರ ಕುಟುಂಬವು ತಿಳಿಸಿದೆ. 2022 ಜೂನ್ನಲ್ಲಿ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಶಿಂದೆ ಬಂಡೆದ್ದಾಗ ವನಗಾ ಅವರನ್ನು ಬೆಂಬಲಿಸಿದ್ದರು.
ಪಕ್ಷ ವಿಭಜನೆಗೊಳ್ಳುವ ಮುನ್ನ 2019ರಲ್ಲಿ ವನಗಾ ಶಿವಸೇನೆ ಅಭ್ಯರ್ಥಿಯಾಗಿ ಪಾಲ್ಘರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು.
ಉದ್ಧವ್ ಠಾಕ್ರೆ ನೇತ್ರತ್ವದ ಶಿವಸೇನೆಯನ್ನು ತೊರೆದು ಶಿಂದೆ ನೇತೃತ್ವದ ಬಣವನ್ನು ಸೇರುವ ಮೂಲಕ ತಾವು ‘ಘೋರ ತಪ್ಪು’ ಎಸಗಿದ್ದಾಗಿ ವನಗಾ ಸೋಮವಾರ ಬೆಳಿಗ್ಗೆ ಹೇಳಿದ್ದರು. ಉದ್ಧವ್ ಠಾಕ್ರೆಯವರನ್ನು ‘ದೇವತಾ ಮನುಷ್ಯ’ ಎಂದೂ ಅವರು ಬಣ್ಣಿಸಿದ್ದರು.
ವನಗಾರ ಪ್ರಸ್ತುತ ಮನಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಟುಂಬ ಸದಸ್ಯರು,ಅವರು ತಮ್ಮೊಂದಿಗೆ ಸಂವಹನ ಮತ್ತು ಆಹಾರ ಸೇವನೆಯನ್ನು ನಿಲ್ಲಿಸಿದ್ದು ಮಾತ್ರವಲ್ಲ, ರೋದಿಸುತ್ತಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ನಡುವೆ ಶಿಂದೆ ನೇತೃತ್ವದ ಶಿವಸೇನೆ ನಾಯಕರು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡುವ ಭರವಸೆಯೊಂದಿಗೆ ವನಗಾರನ್ನು ಸಮಾಧಾನಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನ.20ರಂದು ಚುನಾವಣೆ ನಡೆಯಲಿದ್ದು, ನ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.