ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಪಾಲ್ಘರ್ನಲ್ಲಿ 3.70 ಕೋಟಿ ರೂ.ನಗದು ವಶ
ಸಾಂದರ್ಭಿಕ ಚಿತ್ರ (PTI)
ಪಾಲ್ಘರ್: ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯ ನಡುವೆಯೇ ಪಾಲ್ಘರ್ ಜಿಲ್ಲೆಯಲ್ಲಿ ವ್ಯಾನ್ವೊಂದರಲ್ಲಿ ಸಾಗಿಸಲಾಗುತ್ತಿದ್ದ 3.70 ಕೋಟಿ ರೂ.ಗೂ ಅಧಿಕ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ರಾಜ್ಯದಲ್ಲಿ ನ.20ರಂದು ವಿಧಾನಸಭಾ ಚುನಾವಣೆಗಳು ನಡೆಯಲಿವೆ.
ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ಪಾಲ್ಘರ್ ಜಿಲ್ಲೆಯ ವಾಡಾದಲ್ಲಿ ವ್ಯಾನ್ ಅನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 3,70,50,000 ರೂ.ನಗದು ಹಣ ಪತ್ತೆಯಾಗಿತ್ತು. ನಗದು ಹಣದ ಸಾಗಣೆಗೆ ಅಗತ್ಯವಾದ ದಾಖಲೆಗಳನ್ನು ಒದಗಿಸಲು ವ್ಯಾನ್ ಚಾಲಕ ಮತ್ತು ಭದ್ರತಾ ಸಿಬ್ಬಂದಿ ವಿಫಲಗೊಂಡಿದ್ದರು. ಅವರ ಹೇಳಿಕೆಯಂತೆ ನಗದು ಹಣವನ್ನು ನವಿ ಮುಂಬೈನ ಕಂಪನಿಯೊಂದರಿಂದ ಪಾಲ್ಘರ್ನ ವಿಕ್ರಮಗಡಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೋಲಿಸ್ ಅಧಿಕಾರಿ ದತ್ತಾ ಕಿಂದ್ರೆ ತಿಳಿಸಿದರು.
ನಗದು ಹಣವನ್ನು ವಶಪಡಿಸಿಕೊಂಡಿದ್ದು,ಮುಂದಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ವ್ಯಾನ್ನಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದರು.