ಚುನಾವಣೆಗೂ ಮುನ್ನವೇ ಉದ್ಧವ್ ಬಣಕ್ಕೆ ಮುಜುಗರ | ಔರಂಗಾಬಾದ್ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆಯಿಂದ ಹಿಂದೆ ಸರಿದ ಪಕ್ಷದ ಅಭ್ಯರ್ಥಿ
Credit: X/@tanwanikl
ಛತ್ರಪತಿ ಸಂಭಾಜಿನಗರ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನವೇ ಶಿವಸೇನೆ (ಉದ್ಧವ್ ಬಣ) ಮುಜುಗರಕ್ಕೀಡಾಗಿದ್ದು, ಅದರ ಔರಂಗಾಬಾದ್ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕಿಶನ್ ಚಂದ್ ತನ್ವಾನಿ ತಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಸೋಮವಾರ ಪ್ರಕಟಿಸಿದ್ದಾರೆ.
2014ರ ಚುನಾವಣೆಯಂತೆಯೇ ನನಗೆ ಈ ಬಾರಿಯ ಚುನಾವಣೆಯಲ್ಲೂ ತೀವ್ರ ಪ್ರತಿಕೂಲ ಪರಿಸ್ಥಿತಿ ಇದೆ ಎಂದು ತಮ್ಮ ನಿರ್ಧಾರಕ್ಕೆ ಅವರು ಕಾರಣ ನೀಡಿದ್ದಾರೆ.
ಕಳೆದ ವಾರ ಕಿಶನ್ ಚಂದ್ ತನ್ವಾನಿಯನ್ನು ಔರಂಗಾಬಾದ್ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಶಿವಸೇನೆ (ಉದ್ಧವ್ ಬಣ) ಘೋಷಿಸಿತ್ತು.
ಗಮನಾರ್ಹ ಸಂಗತಿಯೆಂದರೆ, 2014ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತನ್ವಾನಿ, ಮೂರನೆಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಆ ಚುನಾವಣೆಯಲ್ಲಿ ಅವಿಭಜಿತ ಶಿವಸೇನೆಯ ಅಭ್ಯರ್ಥಿಯಾಗಿದ್ದ ಪ್ರದೀಪ್ ಜೈಸ್ವಾಲ್ ಅವರನ್ನು ಎಐಎಂಐಎಂ ಅಭ್ಯರ್ಥಿ ಇಮ್ತಿಯಾಝ್ ಜಲೀಲ್ ಪರಾಭವಗೊಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ತನ್ವಾನಿ, “ನಾನು ಕಳೆದ ಒಂದು ವಾರದಿಂದ ಕ್ಷೇತ್ರದ ಪರಿಶೀಲನೆ ನಡೆಸುತ್ತಿದ್ದೇನೆ. ಇಲ್ಲಿನ ಪರಿಸ್ಥಿತಿಯು 2014ರ ಚುನಾವಣಾ ಪರಿಸ್ಥಿತಿಯ ರೂಪವನ್ನೇ ತಾಳುತ್ತಿದೆ. ಈ ಬಾರಿ ನಾನು ಇಲ್ಲಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನನ್ನ ಚುನಾವಣಾ ಗೆಲುವಿಗಾಗಿ ನಾನು ಜೈಸ್ವಾಲ್ ನೆರವು ಕೋರಿದೆನಾದರೂ, ಅವರು ನನ್ನೊಂದಿಗೆ ಸಹಕರಿಸುತ್ತಿಲ್ಲ. ನಾನು ನನ್ನ ಸ್ಪರ್ಧೆಯ ಹಿಂದೆಗೆತದ ಕುರಿತು ಇದುವರೆಗೂ ಉದ್ಧವ್ ಠಾಕ್ರೆಯೊಂದಿಗೆ ಮಾತನಾಡಿಲ್ಲ. ನಾನು ಅವರೊಂದಿಗೆ ಮಾತುಕತೆ ನಡೆಸಿ, ಅವರ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇನೆ. ನನ್ನ ಅಧಿಕೃತ ನಾಮಪತ್ರವು ಶಿವಸೇನೆ ನಾಯಕ ಅಂಬಾದಾಸ್ ದಾನ್ವೆ ಬಳಿಯಿದೆ” ಎಂದೂ ಹೇಳಿದ್ದಾರೆ.
ಕಳೆದ ವರ್ಷ ನಡೆದಿದ್ದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಕೂಡಾ ಇಂದೋರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದರಿಂದ ಸ್ವಾತಂತ್ರ್ಯಾನಂತರ ನಡೆದ ಚುನಾವಣೆಗಳಲ್ಲಿ ಅದೇ ಪ್ರಥಮ ಬಾರಿಗೆ ಇಂದೋರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸ್ಪರ್ಧೆ ಇಲ್ಲದಂತಾಗಿತ್ತು.