ಶಿವಸೇನೆ ವಿಭಜನೆಗೆ ಬಿಜೆಪಿಯ ಉನ್ನತ ನಾಯಕತ್ವದ ಒಪ್ಪಿಗೆ ಇತ್ತು : ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಆರೋಪ
ಪೃಥ್ವಿರಾಜ್ ಚೌಹಾಣ್ | PC : PTI
ಪುಣೆ : ಮಹಾವಿಕಾಸ್ ಅಘಾಡಿ ಸರಕಾರದ ಪತನಕ್ಕೆ ಕಾರಣವಾಗಿದ್ದ 2022ರಲ್ಲಿನ ಶಿವಸೇನೆ ವಿಭಜನೆಗೆ ಬಿಜೆಪಿಯ ಉನ್ನತ ನಾಯಕತ್ವ ಒಪ್ಪಿಗೆ ನೀಡಿತ್ತು ಎಂದು ಬುಧವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪೃಥ್ವಿರಾಜ್ ಚೌಹಾಣ್ ಆರೋಪಿಸಿದ್ದಾರೆ.
ಸತಾರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, 2022ರಲ್ಲಿ ಮುಖ್ಯಮಂತ್ರಿಯಾಗಿದ್ದ ಹಾಗೂ ಶಿವಸೇನೆಯ ಅಧ್ಯಕ್ಷರಾಗಿದ್ದ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಒಂದು ವರ್ಗದ ಶಿವಸೇನೆ ನಾಯಕರು ನಡೆಸಿದ ಬಂಡಾಯದ ಹಿನ್ನೆಲೆಯಲ್ಲಿ ನವೆಂಬರ್ 20ರ ಚುನಾವಣೆ ನಡೆಯಲಿದೆ ಎಂದು ಪ್ರತಿಪಾದಿಸಿದ್ದಾರೆ.
ಶಿವಸೇನೆ ವಿಭಜನೆಗೊಂಡ ನಂತರ, ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿದ್ದರು.
“ಈ ಬಾರಿ ರಾಜ್ಯ ಚುನಾವಣೆ ನಿರ್ದಿಷ್ಟ ರಾಜಕೀಯ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಶಿವಸೇನೆಯನ್ನು ವಿಭಜಿಸುವ ಮೂಲಕ, ಬಿಜೆಪಿಯ ಉನ್ನತ ನಾಯಕತ್ವವು ಮಹಾವಿಕಾಸ್ ಅಘಾಡಿ ಸರಕಾರವನ್ನು ಪತನಗೊಳಿಸಿತ್ತು. ಈ ಸಂಪೂರ್ಣ ನಡೆಗೆ ಬಿಜೆಪಿ ಉನ್ನತ ನಾಯಕತ್ವದ ಅನುಮೋದನೆಯಿತ್ತು” ಎಂದು ಅವರು ಆರೋಪಿಸಿದ್ದಾರೆ.
“ಈ ಯೋಜನೆಯನ್ನು ಕೇವಲ ಇಬ್ಬರು ಮೂವರಿಂದ ಮುಂಬೈನಲ್ಲಿ ಮಾಡಲಾಗಿಲ್ಲ. ಇದರ ಹಿಂದೆ ಇಡೀ ಬಿಜೆಪಿ ಯಂತ್ರವೇ ಇದ್ದುದರಿಂದ, ಅತ್ಯಂತ ನಾಜೂಕಾಗಿ ಈ ಯೋಜನೆಯನ್ನು ಮಾಡಲಾಗಿತ್ತು. ಸೇನಾ ಕಾರ್ಯಾಚರಣೆಯಂತೆ ಶಾಸಕರಿಗೆ ಭದ್ರತೆ ಹಾಗೂ ಚಾರ್ಟರ್ಡ್ ವಿಮಾನಗಳನ್ನು ಒದಗಿಸಲಾಗಿತ್ತು” ಎಂದೂ ಅವರು ಆಪಾದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ‘ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂಬ ಭ್ರಷ್ಟಾಚಾರ ವಿರೋಧಿ ಘೋಷಣೆಯನ್ನು ಮಹಾರಾಷ್ಟ್ರದಲ್ಲಿ ಕೂಗಲು ಸಾಧ್ಯವಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದ್ದಾರೆ.