ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಮತದಾರರ ಮೇಲೆ ಪ್ರಭಾವ ಬೀರಲು ಎಂಎನ್ಎಸ್, ವಿಬಿಎ, ಬಿಎಸ್ಪಿ ವಿಫಲ
ಸಾಂದರ್ಭಿಕ ಚಿತ್ರ | PTI
ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಅದ್ಭುತ ಗೆಲುವನ್ನು ಸಾಧಿಸಿದ್ದರೆ ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್), ಪ್ರಕಾಶ್ ಅಂಬೇಡ್ಕರ್ರ ವಂಚಿತ ಬಹುಜನ ಅಘಾಡಿ(ವಿಬಿಎ) ಮತ್ತು ಬಿಎಸ್ಪಿ ಮತದಾರರ ಮೇಲೆ ಯಾವುದೇ ಪ್ರಭಾವ ಬೀರುವಲ್ಲಿ ವಿಫಲಗೊಂಡಿವೆ.
ಎಸ್ಪಿ ಮತ್ತು ಎಐಎಂಐಎಂನಂತಹ ಪಕ್ಷಗಳು ಇದಕ್ಕಿಂತ ಕೊಂಚ ಉತ್ತಮ ಸ್ಥಿತಿಯಲ್ಲಿವೆ. ಎಸ್ಪಿ ಎರಡು ಸ್ಥಾನಗಳನ್ನು ಗಳಿಸಿದ್ದರೆ ಎಐಎಂಐಎಂ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಬಿಎಸ್ಪಿ ಮತ್ತು ಆಝಾದ್ ಸಮಾಜ ಪಾರ್ಟಿ(ಕಾನ್ಶಿರಾಂ) ಅನುಕ್ರಮವಾಗಿ 237 ಮತ್ತು 28 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವಾದರೂ ಶೂನ್ಯ ಸಾಧನೆಯನ್ನು ಮಾಡಿವೆ. ಬಿಎಸ್ಪಿ ಈ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು.
ಅನುಕ್ರಮವಾಗಿ 125 ಮತ್ತು 200 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಂಎನ್ಎಸ್ ಮತ್ತು ವಿಬಿಎ ರಾಜ್ಯದಲ್ಲಿ ಖಾತೆ ತೆರೆಯುವಲ್ಲಿ ವಿಫಲಗೊಂಡಿವೆ.
ಮತಎಣಿಕೆಯ ಮುನ್ನಾ ದಿನ ಪ್ರಕಾಶ ಅಂಬೇಡ್ಕರ್ ಅವರು,ತನ್ನ ಪಕ್ಷವು ಗಮನಾರ್ಹ ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಸರಕಾರವನ್ನು ರಚಿಸುವ ಮೈತ್ರಿಕೂಟವನ್ನು ಬೆಂಬಲಿಸಲಿದೆ ಎಂದು ಹೇಳಿದ್ದರು.
ರಾಜ್ ಠಾಕ್ರೆಯವರ ಪುತ್ರ ಅಮಿತ್ ಠಾಕ್ರೆ ಮುಂಬೈನ ಮಾಹಿಮ್ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಎಂಎನ್ಎಸ್ ನೋವನ್ನು ಇನ್ನಷ್ಟು ಹೆಚ್ಚಿಸಿದೆ.
ರೈತರ ಮೇಲೆ,ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರಭಾವವನ್ನು ಹೊಂದಿರುವ ರಾಜು ಶೆಟ್ಟಿ ನೇತೃತ್ವದ ಸ್ವಾಭಿಮಾನಿ ಪಕ್ಷವು 19 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ ಶೂನ್ಯ ಸಾಧನೆಯನ್ನು ಮಾಡಿದೆ. ಬಚ್ಚು ಕಡು ನೇತೃತ್ವದ ಪ್ರಹಾರ ಜನಶಕ್ತಿ ಪಾರ್ಟಿ ಕೂಡ 38 ಅಭ್ಯರ್ಥಿಗಳನ್ನು ನಿಲ್ಲಿಸಿತ್ತಾದರೂ ಮತದಾರರನ್ನು ಸೆಳೆಯುವಲ್ಲಿ ವಿಫಲಗೊಂಡಿದೆ.
ಎಸ್ಪಿ ಮತ್ತು ಜನ ಸುರಾಜ್ಯ ಶಕ್ತಿ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದರೆ, ಸಿಪಿಎಂ, ಎಐಎಂಐಎಂ, ರಾಷ್ಟ್ರೀಯ ಯುವ ಸ್ವಾಭಿಮಾನ ಪಾರ್ಟಿ, ರಾಷ್ಟ್ರೀಯ ಸಮಾಜ ಪಕ್ಷ, ರೈತರು ಮತ್ತು ಕಾರ್ಮಿಕರ ಪಕ್ಷ ಹಾಗೂ ರಾಜಶ್ರೀ ಶಾಹು ವಿಕಾಸ ಅಘಾಡಿ ತಲಾ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ಒಟ್ಟು 158 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು.