ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲಿಸಲು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಒತ್ತಾಯ
ಸಂವಿಧಾನ ಬದಲಾವಣೆ ಕುರಿತು ಬಿಜೆಪಿ ನಾಯಕರ ಹೇಳಿಕೆಗೆ ಆಕ್ಷೇಪ
ಪ್ರಧಾನಿ ಮೋದಿ, ಅಮಿತ್ ಶಾ | PC : PTI
ಮುಂಬೈ: ನಾವೇನಾದರೂ 400 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದರೆ ಸಂವಿಧಾನವನ್ನು ಬದಲಿಸುತ್ತಿದ್ದೆವು ಎಂಬ ಬಿಜೆಪಿ ನಾಯಕರ ಹೇಳಿಕೆಗಳನ್ನು ಆಕ್ಷೇಪಿಸಿರುವ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸಂದೇಶ್ ಸಿಂಗಾಲ್ಕರ್, ಈ ಸಂಬಂಧ ಈ ವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಆಡಳಿತಾರೂಢ ಪಕ್ಷದ ಉನ್ನತ ನಾಯಕತ್ವದ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ವರ್ಷಾರಂಭದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ, ಸಂವಿಧಾನವನ್ನು ಬದಲಿಸಲು ನಮಗೆ 400 ಲೋಕಸಭಾ ಸ್ಥಾನಗಳ ಅಗತ್ಯವಿದೆ ಎಂದು ಕೆಲವು ಬಿಜೆಪಿ ಸಂಸದರು, ಅಭ್ಯರ್ಥಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ಸಾರ್ವಜನಿಕ ಹೇಳಿಕೆ ನೀಡಿದ್ದರು ಎಂದು ಸಿಂಗಾಲ್ಕರ್ ಆರೋಪಿಸಿದ್ದಾರೆ.
“ಇದು ಭಾರತದ ಸಂವಿಧಾನದ ಅಸ್ತಿತ್ವಕ್ಕೆ ನೇರ ಬೆದರಿಕೆಯಾಗಿದೆ. ಆದರೆ, ಈ ಹೇಳಿಕೆಗಳ ವಿರುದ್ಧ ಬಿಜೆಪಿ ಹೈಕಮಾಂಡ್ ನಾಯಕರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಹಾಗೂ ಆ ಹೇಳಿಕೆಗಳನ್ನು ಹಿಂಪಡೆಯಲೂ ಇಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಅಪ್ರಜಾಸತ್ತಾತ್ಮಕ ಚಿಂತನೆಗಳ ಬೆಂಬಲಿಗರು ಎಂಬುದನ್ನು ಇದು ತೋರಿಸುತ್ತಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ವಕೀಲ ಅಸೀಂ ಸರೋಡೆ ಮೂಲಕ ಗುರುವಾರ ಸಂಜೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 363 ಹಾಗೂ 49ರ ಅಡಿ ಎಫ್ಐಆರ್ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
“ಬಿಜೆಪಿ ಸಂಸದರಾದ ಕರ್ನಾಟಕದ ಅನಂತ್ ಕುಮಾರ್ ಹೆಗಡೆ, ತೆಲಂಗಾಣದ ಧರ್ಮಪುರಿ ಅರವಿಂದ್, ಮೀರತ್ ನ ಅರುಣ್ ಗೋವಿಲ್, ಅಯೋಧ್ಯೆಯ ಲಲ್ಲು ಸಿಂಗ್, ರಾಜಸ್ಥಾನದಲ್ಲಿನ ನಾಗಪುರದ ಜ್ಯೋತಿ ಮಿರ್ಧಾ ಹಾಗೂ ರಾಜಸ್ಥಾನದ ಉಪ ಮುಖ್ಯಮಂತ್ರಿ ದಿವ್ಯಾ ಕುಮಾರಿ ಅವರು ಮಾಡಿರುವ ಅಪರಾಧ ಕೃತ್ಯಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ಕುಮ್ಮಕ್ಕು ನೀಡಿರುವುದರಿಂದ, ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದೇವೆ” ಎಂದು ಸಿಂಗಾಲ್ಕರ್ ತಿಳಿಸಿದ್ದಾರೆ.