ಮಹಾರಾಷ್ಟ್ರ ಕಾಂಗ್ರೆಸ್, ಎನ್‌ಸಿಪಿಯಿಂದ ಸನ್ಮಾನ; ಕೊಲ್ಲಾಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯಗೆ ನಾಯಕರಿಂದ ಸ್ವಾಗತ
ಕೊಲ್ಲಾಪುರ: ಮಹಾರಾಷ್ಟ್ರದ ಸಾಂಗ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಭಾಗವಹಿಸಲು ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಬಾಳಾ ಸಾಹೇಬ್ ತೋರತ್ ಅವರು ಸಿದ್ದರಾಮಯ್ಯ ಅವರಿಗೆ ಹೂ ಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ಸಾಂಗ್ಲಿಗೆ ರಸ್ತೆ ಮೂಲಕ ಪ್ರಯಾಣಿಸಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಆಯೋಜಿಸಿರುವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿದ್ದರಾಮಯ್ಯ, ಅಲ್ಲಿಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಹ್ವಾನದ ಮೇರೆಗೆ ಬಾರಾಮತಿಯಲ್ಲಿ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಲ್ಕರ್ ವಿಕಾಸ್ ಪ್ರತಿಷ್ಠಾನ ಆಯೋಜಿಸುವ 18ನೇ ಶತಮಾನದ ಮರಾಠ ರಾಣಿ ಅಹಿಲ್ಯಾದೇವಿ ಹೋಲ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಯೂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿದು ಬಂದಿದೆ.
ಶರದ್ ಪವಾರ್ ಅವರು ಸಿದ್ದರಾಮಯ್ಯಗೆ ಜೂನ್ 9ರಂದು ಪತ್ರ ಬರೆದು ಬಾರಾಮತಿಗೆ ಆಹ್ವಾನಿಸಿದ್ದರು. ಪುಣೆ ಜಿಲ್ಲೆಯಲ್ಲಿರುವ ಬಾರಾಮತಿ ಪವಾರ್ ಅವರ ತವರು ಕ್ಷೇತ್ರವಾಗಿದೆ. “ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಜಾತ್ಯತೀತ ಶಕ್ತಿಗಳ ಬಲವನ್ನು ಪ್ರದರ್ಶಿಸಿದೆ. ಅದರ ಪರಿಣಾಮ ಮಹಾರಾಷ್ಟ್ರದಲ್ಲೂ ಬೀರಿದ್ದು ಜನರು ನಿಮ್ಮನ್ನು ಸ್ವಾಗತಿಸಲು ಮತ್ತು ಸನ್ಮಾನಿಸಲು ಉತ್ಸುಕರಾಗಿದ್ದಾರೆ,” ಎಂದು ಪವಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದರು.