ಮಹಾರಾಷ್ಟ್ರ | ಪತ್ನಿಯ ಕುಟುಂಬದಿಂದ ದಲಿತ ಯುವಕನ ಹತ್ಯೆ
ಸಾಂದರ್ಭಿಕ ಚಿತ್ರ
ಮುಂಬೈ : 25 ಹರೆಯದ ದಲಿತ ಯುವಕನನ್ನು ಆತನ ಪತ್ನಿಯ ಕುಟುಂಬದವರು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ.
ಮೃತ ಯುವಕನೊಂದಿಗೆ ತಮ್ಮ 18ರ ಹರೆಯದ ಪುತ್ರಿಯ ವಿವಾಹವನ್ನು ಆರೋಪಿಗಳು ವಿರೋಧಿಸಿದ್ದರು. ಯುವತಿಯ ಕುಟುಂಬ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದೆ.
ಅಮಿತ್ ಮುರಳೀಧರ ಸಾಳುಂಖೆ ಕೊಲೆಯಾಗಿರುವ ವ್ಯಕ್ತಿ. ಜುಲೈ 14ರಂದು ಸಾಳುಂಖೆಯ ಮಾವ ಮತ್ತು ಪತ್ನಿಯ ಸೋದರ ಸಂಬಂಧಿ ಹರಿತವಾದ ಆಯುಧಗಳಿಂದ ಆತನ ಮೇಲೆ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಾಳುಂಖೆ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪೋಷಕರು ತನಗೆ ಮದುವೆಯ ವಿರುದ್ಧ ಎಚ್ಚರಿಕೆ ನೀಡುವಾಗ ಜನಪ್ರಿಯ ಮರಾಠಿ ಚಿತ್ರ ‘ಸೈರಾಟ್’ನ ಕಥಾವಸ್ತುವನ್ನು ಉಲ್ಲೇಖಿಸಿದ್ದರು ಎಂದು ಸಾಳುಂಖೆಯ ಪತ್ನಿ ವಿದ್ಯಾ ಕೀರ್ತಿಶಾಹಿ ಪೋಲಿಸರಿಗೆ ತಿಳಿಸಿದ್ದಾರೆ.
2016ರಲ್ಲಿ ಬಿಡುಗಡೆಗೊಂಡಿದ್ದ ನಾಗರಾಜ ಮಂಜುಳೆಯವರ ಪ್ರಶಸ್ತಿ ವಿಜೇತ ಚಿತ್ರ ‘ಸೈರಾಟ್’ ಕೆಳಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮೇಲ್ಜಾತಿಯ ಯುವತಿಯ ಕಥೆಯನ್ನು ಒಳಗೊಂಡಿದೆ. ತಮ್ಮನ್ನು ವಿರೋಧಿಸಿ ಮದುವೆ ಮಾಡಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಅಂತಿಮವಾಗಿ ಕುಟುಂಬದ ಸದಸ್ಯರು ಈ ಜೋಡಿಯನ್ನು ಕೊಲ್ಲುತ್ತಾರೆ.
‘‘ನನ್ನ ಪೋಷಕರು ನನ್ನನ್ನು ಬಲವಂತದಿಂದ ಬೇರೆ ಯುವಕನೊಂದಿಗೆ ಮಾಡಲು ಬಯಸಿದ್ದರು. ಅವರು ಆತನಿಂದ ನಾಲ್ಕು ಲಕ್ಷ ರೂ.ತೆಗೆದುಕೊಂಡಿದ್ದರು. ಆದರೆ ಆ ಮದುವೆ ನನಗೆ ಇಷ್ಟವಿರಲಿಲ್ಲ. ಪರಸ್ಪರ ಒಪ್ಪಿಗೆಯ ಮೇರೆಗೆ ನಾನು ಮತ್ತು ಅಮಿತ್ ನಮ್ಮ ಧಾರ್ಮಿಕ ಪದ್ಧತಿಯಂತೆ ಮದುವೆ ಮಾಡಿಕೊಂಡಿದ್ದೆವು. ಆರಂಭದಲ್ಲಿ ಕುಟುಂಬಗಳು ನಮ್ಮನ್ನು ಸ್ವೀಕರಿಸಿರಲಿಲ್ಲ. ಮದುವೆಯ ಬಳಿಕ ನನ್ನ ಕುಟುಂಬವು ನಮ್ಮ ‘ಸೈರಾಟ್’ ಮಾಡುವುದಾಗಿ ಬೆದರಿಕೆಯೊಡ್ಡಿತ್ತು’’ ಎಂದು ಕೀರ್ತಿಶಾಹಿ ಪೋಲಿಸರಿಗೆ ತಿಳಿಸಿದ್ದಾರೆ.
ಸಾಳುಂಖೆ ಮೃತಪಟ್ಟ ದಿನ ಆತನ ಕುಟುಂಬವು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಇಬ್ಬರೂ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿತ್ತು. ಅವರು ಮದುವೆಯನ್ನು ಒಪ್ಪಿಕೊಂಡಿದ್ದರು ಮತ್ತು ತಮ್ಮನ್ನು ಅನುಸರಿಸುವಂತೆ ಕೀರ್ತಿಶಾಹಿಯ ಸಂಬಂಧಿಗಳ ಮನವೊಲಿಸಲು ಹಲವು ಸಂದರ್ಭಗಳಲ್ಲಿ ಪ್ರಯತ್ನಿಸಿದ್ದರು ಎನ್ನಲಾಗಿದೆ.
ಪ್ರಕರಣದಲ್ಲಿ ಕೀರ್ತಿಶಾಹಿಯ 35ರ ಹರೆಯದ ಸೋದರ ಸಂಬಂಧಿ ಅಪ್ಪಾಸಾಹೇಬ್ ಅಶೋಕ ಕೀರ್ತಿಶಾಹಿ (35)ಯನ್ನು ಬಂಧಿಸಲಾಗಿದ್ದು, ಆಕೆಯ ತಂದೆ ಗೀತಾರಾಮ ಭಾಸ್ಕರ ಕೀರ್ತಿಶಾಹಿ (52) ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ ಎಂದು ತಿಳಿಸಿದ ಡಿಸಿಪಿ ನವನೀತ್ ಕುಮಾರ ಕಾವಟ್,ಆತನ ಜಾಮೀನು ರದ್ದುಗೊಳಿಸಲು ನಾವು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಲಿದ್ದೇವೆ ಎಂದರು.
ತಮ್ಮ ಕುಟುಂಬಗಳಿಂದ ಪ್ರತೀಕಾರದ ಭಯದಿಂದ ಅಂತರ್ಜಾತೀಯ ಮತ್ತು ಅಂತರ್ಧರ್ಮೀಯ ದಂಪತಿಗಳು ಸಾಮಾನ್ಯವಾಗಿ ಪೋಲಿಸ್ ರಕ್ಷಣೆಯನ್ನು ಕೋರುತ್ತಾರೆ. ಆದರೆ ಸಾಳುಂಖೆ ಮತ್ತು ಕೀರ್ತಿಶಾಹಿ ಇಂತಹ ಮನವಿಯನ್ನು ಮಾಡಿಕೊಂಡಿರಲಿಲ್ಲ ಎಂದರು.