ಮದ್ರಸಾ ಶಿಕ್ಷಕರ ವೇತನವನ್ನು ಮೂರು ಪಟ್ಟು ಹೆಚ್ಚಿಸಿದ ಮಹಾರಾಷ್ಟ್ರ ಸರಕಾರ: ವರದಿ
ಅಲ್ಪಸಂಖ್ಯಾತ ಸಮುದಾಯಗಳಿಗೆ ಕಲ್ಯಾಣ ಕಾರ್ಯಕ್ರಮಗಳ ಪ್ರಕಟಣೆ
ಮುಂಬೈ: ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನೇತೃತ್ವದ ಮಹಾಯುತಿ ಸರಕಾರ, ಮುಸ್ಲಿಂ ಸಮುದಾಯ ಹಾಗೂ ಹಿಂದುಳಿದ ಸಮುದಾಯಗಳನ್ನು ತನ್ನತ್ತ ಸೆಳೆಯಲು ಗುರುವಾರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಉಪಕ್ರಮಗಳನ್ನು ಪ್ರಕಟಿಸಿದೆ ಎಂದು newindianexpress.com ವರದಿ ಮಾಡಿದೆ.
ಈ ಪೈಕಿ ಗಮನಾರ್ಹ ನಿರ್ಧಾರವೆಂದರೆ, ಝಾಕೀರ್ ಹುಸೈನ್ ಮದ್ರಸಾ ಆಧುನೀಕರಣ ಯೋಜನೆಯಡಿ ಮದ್ರಸಾ ಶಿಕ್ಷಕರ ವೇತನಗಳ ಹೆಚ್ಚಳ. ಡಿಇಡಿ ಪದವಿ ಪಡೆದಿರುವ ಪ್ರಾಥಮಿಕ ಮದ್ರಸಾ ಶಿಕ್ಷಕರು ಇನ್ನು ಮುಂದೆ ರೂ. 6,000 ವೇತನದ ಬದಲು ರೂ. 16,000 ವೇತನ ಸ್ವೀಕರಿಸಲಿದ್ದಾರೆ. ಬಿಇಡಿ ಪದವಿ ಪಡೆದಿರುವ ಪ್ರೌಢ ಮದ್ರಸಾ ಶಿಕ್ಷಕರು ಇನ್ನು ಮುಂದೆ ರೂ. 8,000 ವೇತನದ ಬದಲು ರೂ. 18,000 ವೇತನ ಪಡೆಯಲಿದ್ದಾರೆ. ಈ ಯೋಜನೆಯು ಆಧುನಿಕ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ಶಾಸ್ತ್ರ, ಇಂಗ್ಲಿಷ್, ಮರಾಠಿ, ಹಿಂದಿ ಹಾಗೂ ಉರ್ದುವನ್ನು ಧಾರ್ಮಿಕ ಅಧ್ಯಯನದೊಂದಿಗೆ ಒಳಗೊಳ್ಳುವುದನ್ನು ಪ್ರೋತ್ಸಾಹಿಸುತ್ತದೆ.
ಇದರೊಂದಿಗೆ, ಮೌಲಾನಾ ಆಝಾದ್ ಹಣಕಾಸು ನಿಗಮದ ಬಂಡವಾಳವನ್ನು ರೂ. 600 ಕೋಟಿಯಿಂದ ರೂ. 1,000 ಕೋಟಿಗೆ ಏರಿಕೆ ಮಾಡಲೂ ಅನುಮೋದನೆ ನೀಡಲಾಗಿದೆ. ಹೆಚ್ಚಳ ಮಾಡಲಾಗಿರುವ ಬಂಡವಾಳವನ್ನು ವಿವಿಧ ಉದ್ದೇಶಗಳಿಗಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಒದಗಿಸಲು ಬಳಸಲಾಗುತ್ತದೆ.
ಮತ್ತೊಂದು ಪ್ರಮುಖ ನಿರ್ಧಾರದಲ್ಲಿ, ಶಿಂಪಿ, ಗವಾಲಿ, ಲಾಡ್ ಶಾಕಿಯ-ವಾನಿ, ಲೋಹರ್ ಹಾಗೂ ನಾಮ್ ಪಂಥ್ ಸೇರಿದಂತೆ ಹಲವಾರು ಸಮುದಾಯಗಳಿಗೆ ಕಲ್ಯಾಣ ಸಹಕಾರ ಸಂಘಗಳನ್ನು ಸ್ಥಾಪಿಸಲೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿ ಮಂಡಳಿಗಳೂ ಸಾಮಾಜಿಕ ಹಾಗೂ ಸಾಮುದಾಯಿಕ ಚಟುವಟಿಕೆಗಳಿಗಾಗಿ ತಲಾ ರೂ. 50 ಕೋಟಿ ಬಂಡವಾಳ ಹೂಡಿಕೆಯನ್ನು ಸ್ವೀಕರಿಸಲಿವೆ.
ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯ ಲಾಭವನ್ನು ಮತ್ತಷ್ಟು ಮಂದಿ ಪಡೆಯಲು ಅವಕಾಶವಾಗುವಂತೆ ಕೆನೆರಹಿತ ಪದರಕ್ಕೆ ನಿಗದಿಪಡಿಸಲಾಗಿರುವ ಆದಾಯ ಮಿತಿಯನ್ನು ರೂ. 8 ಲಕ್ಷದಿಂದ ರೂ. 15 ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲು ರಾಜ್ಯ ಸರಕಾರವು ನಿರ್ಣಯವೊಂದನ್ನು ಅಂಗೀಕರಿಸಿದೆ.
ಮತ್ತೊಂದು ಗಮನಾರ್ಹ ನಡೆಯಲ್ಲಿ, ಮಹಾರಾಷ್ಟ್ರ ರಾಜ್ಯ ಪರಿಶಿಷ್ಟ ಜಾತಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ಮಂಜೂರು ಮಾಡಲು ಸುಗ್ರೀವಾಜ್ಞೆ ಹೊರಡಿಸಲೂ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗಲಿರುವ ಸುಗ್ರೀವಾಜ್ಞೆಯು ಆಯೋಗದಲ್ಲಿ 27 ಹುದ್ದೆಗಳನ್ನು ಸೃಜಿಸುವ ಪ್ರಸ್ತಾವವನ್ನೂ ಹೊಂದಿದೆ.