ಮಹಾರಾಷ್ಟ್ರ: ಅಕ್ರಮವಾಗಿ ಮರ ಕಡಿಯುವವರಿಗೆ ರೂ. 50 ಸಾವಿರ ದಂಡ; ಸಚಿವ ಸಂಪುಟ ನಿರ್ಧಾರ
ಸಾಂದರ್ಭಿಕ ಚಿತ್ರ (PTI)
ಮುಂಬೈ: ರಾಜ್ಯದ ಹಸಿರು ಹೊದಿಕೆಯನ್ನು ಸಂರಕ್ಷಿಸುವ ಪ್ರಯತ್ನವಾಗಿ, ಅಕ್ರಮ ಮರ ಕಡಿಯುವವರ ಮೇಲೆ 50 ಸಾವಿರ ರೂಪಾಯಿ ದಂಡ ವಿಧಿಸಲು ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಅಕ್ರಮವಾಗಿ ಮರ ಕಡಿಯುವವರಿಗೆ ವಿಧಿಸುತ್ತಿರುವ ದಂಡವನ್ನು 1000 ರೂಪಾಯಿಗಳಿಂದ 50 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಸಂಬಂಧ ಕೃಷಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅನುಮೋದಿಸಿದೆ. ರಾಜ್ಯ ಸರ್ಕಾರದ ನಿರ್ಣಯದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಆದೇಶ ಹೊರಡಿಸಲಿದೆ.
ಜತೆಗೆ ಮರ ಕಡಿಯಲು ಬಳಸುವ ಸಾಧನಗಳನ್ನು ಮತ್ತು ಯಂತ್ರಗಳನ್ನು ವಶಪಡಿಸಿಕೊಳ್ಳಲು ಕೂಡಾ ಸಂಪುಟ ನಿರ್ಧರಿಸಿದೆ. "ಹಾಲಿ ಇರುವ ಮಹಾರಾಷ್ಟ್ರ ಮರ ಕಡಿಯುವ ಕಾಯ್ದೆ-1964ರ ಸೆಕ್ಷನ್ 4ಕ್ಕೆ ತಿದ್ದುಪಡಿ ತಂದು, ಮರ ಕಡಿಯುವವರ ಸಾಧನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಅಕ್ರಮವಾಗಿ ಮರ ಸಾಗಾಣಿಕೆ ಮಾಡುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಆಗಸ್ಟ್ 9ರಿಂದ 15ರವರೆಗೆ ಎಲ್ಲ ಮನೆಗಳಲ್ಲಿ 2.5 ಕೋಟಿ ರಾಷ್ಟ್ರಧ್ವಜಗಳನ್ನು ಹಾರಿಸಲು ಕೂಡಾ ಸರ್ಕಾರ ನಿರ್ಧರಿಸಿದೆ. ದೇಶದ ಹೆಮ್ಮೆ ಮತ್ತು ಗೌರವದ ಪ್ರತೀಕವಾಗಿ ಆಗಸ್ಟ್ 13, 14 ಮತ್ತು 15ರಂದು ಎಲ್ಲ ಮನೆಗಳಲ್ಲಿ ಧ್ವಜ ಹಾರಿಸುವಂತೆ ಸರ್ಕಾರ ಕರೆ ನೀಡಿದೆ.