ಫಡ್ನವೀಸ್ ಸರಕಾರದ ‘ಕಡ್ಡಾಯ ಹಿಂದಿ’ ಕ್ರಮಕ್ಕೆ ಮಹಾರಾಷ್ಟ್ರ ಭಾಷಾ ಸಮಿತಿಯ ವಿರೋಧ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ | Photo : PTI
ಮುಂಬೈ: ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ಮಹಾರಾಷ್ಟ್ರ ಸರಕಾರದ ಭಾಷಾ ಸಮಾಲೋಚನಾ ಸಮಿತಿಯು ರವಿವಾರ ಒಕ್ಕೊರಳಿನಿಂದ ವಿರೋಧಿಸಿದೆ.
ಕಡ್ಡಾಯ ಹಿಂದಿ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ ದೇಶಮುಖ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರಕಾರವು ಎ.17ರಂದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಗೆ ಅನುಗುಣವಾಗಿ ಎಲ್ಲ ರಾಜ್ಯ ಮಂಡಳಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮರಾಠಿ ಮತ್ತು ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಕಡ್ಡಾಯಗೊಳಿಸಿ ಆದೇಶಿಸಿತ್ತು.
ವಿರೋಧ ಪಕ್ಷಗಳು ಈ ಕ್ರಮವನ್ನು ವಿರೋಧಿಸಿದ ಬಳಿಕ ಫಡ್ನವೀಸ್ ಅವರು ‘ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆಯು ಕಡ್ಡಾಯವಾಗಿದೆ. ಪ್ರತಿಯೊಬ್ಬರೂ ಅದನ್ನು ಕಲಿಯಬೇಕು. ಜೊತೆಗೆ ವಿದ್ಯಾರ್ಥಿಗಳು ಇತರ ಭಾಷೆಗಳನ್ನು ಕಲಿಯಲು ಬಯಸಿದರೆ ಅದಕ್ಕೆ ಅವಕಾಶವಿದೆ. ಹಿಂದಿಗೆ ಮತ್ತು ಇಂಗ್ಲಿಷ್ ಭಾಷೆಗೆ ಉತ್ತೇಜನಕ್ಕೆ ವಿರೋಧ ಆಶ್ಚರ್ಯಕರವಾಗಿದೆ. ಯಾರಾದರೂ ಮರಾಠಿಯನ್ನು ವಿರೋಧಿಸಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಸರಕಾರದ ಕ್ರಮವನ್ನು ಪ್ರತಿಪಕ್ಷಗಳು ಪ್ರತಿಭಟಿಸಿವೆ.
‘ಮಹಾರಾಷ್ಟ್ರದಲ್ಲಿ ಸಿಬಿಎಸ್ಇ ಮಂಡಳಿಯನ್ನು ಕಡ್ಡಾಯಗೊಳಿಸುವ ಕುರಿತು ಶಿಕ್ಷಣ ಸಚಿವರ ಹೇಳಿಕೆಯನ್ನು ವಿರೋಧಿಸಿದವರಲ್ಲಿ ನಾನು ಮೊದಲಿಗಳಾಗಿದ್ದೆ. ಅಸ್ತಿತ್ವದಲ್ಲಿರುವ ರಾಜ್ಯ ಮಂಡಳಿಯ ಬದಲು ಸಿಬಿಎಸ್ಇ ತರುವ ಅಗತ್ಯವೇನಿದೆ? ಭಾಷಾ ಸಮಸ್ಯೆಯನ್ನು ಚರ್ಚಿಸುವ ಮುನ್ನ ನಾವು ರಾಜ್ಯದಲ್ಲಿಯ ಮೂಲಭೂತ ಶಿಕ್ಷಣ ಮೂಲಸೌಕರ್ಯದ ಕುರಿತು ಮಾತನಾಡಬೇಕು’ ಎಂದು ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಲೆ ಹೇಳಿದ್ದರೆ, 'ನೀವು ಪ್ರೀತಿಯಿಂದ ಕೇಳಿಕೊಂಡರೆ ನಾವು ಎಲ್ಲವನ್ನೂ ಮಾಡುತ್ತೇವೆ. ಆದರೆ ನೀವು ಏನನ್ನಾದರೂ ಹೇರಿದರೆ ನಾವು ವಿರೋಧಿಸುತ್ತೇವೆ. ಹಿಂದಿ ಕಲಿಯಲು ಈ ಬಲವಂತವೇಕೆ?’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆ ಪ್ರಶ್ನಿಸಿದ್ದಾರೆ.
‘ನೀವು(ಸರಕಾರ) ಹಿಂದಿ ಕಲಿಕೆಯನ್ನು ಐಚ್ಛಿಕವಾಗಿಸಬಹುದು, ಆದರೆ ನೀವು ಅದನ್ನು ಹೇರುವಂತಿಲ್ಲ. ಯಾರ ಒತ್ತಾಸೆಯ ಮೇರೆಗೆ ರಾಜ್ಯದಲ್ಲಿ ಹಿಂದಿಯನ್ನು ಹೇರಲು ನೀವು ಪ್ರಯತ್ನಿಸುತ್ತಿದ್ದೀರಿ?’ ಎಂದು ಕಾಂಗ್ರೆಸ್ ನಾಯಕ ವಿಜಯ ವಡೆಟ್ಟಿವಾರ್ ಪ್ರಶ್ನಿಸಿದ್ದಾರೆ.