ಹಣಕಾಸು ಇಲಾಖೆ ಆಕ್ಷೇಪಿಸಿದ್ದರೂ ಬಿಜೆಪಿ ನಾಯಕನಿಗೆ ಸಂಬಂಧಿಸಿದ ಬ್ಯಾಂಕಿಗೆ ಭೂಮಿಯನ್ನು ಗುತ್ತಿಗೆ ನೀಡಿದ ಮಹಾರಾಷ್ಟ್ರ ಸರಕಾರ
ಬಿಜೆಪಿ ನಾಯಕ ಪ್ರವೀಣ ದರೇಕರ್ (PTI)
ಮುಂಬೈ: ಬಿಜೆಪಿ ನಾಯಕ ಪ್ರವೀಣ ದರೇಕರ್ ಅಧ್ಯಕ್ಷರಾಗಿರುವ ಮುಂಬೈ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಭೂಮಿಯನ್ನು ಗುತ್ತಿಗೆಗೆ ನೀಡಲು ತನ್ನದೇ ಹಣಕಾಸು ಇಲಾಖೆಯು ಆಕ್ಷೇಪಿಸಿದ್ದರೂ ಅದನ್ನು ಕಡೆಗಣಿಸಿರುವ ಮಹಾರಾಷ್ಟ್ರ ಸರಕಾರವು ದಕ್ಷಿಣ ಮಧ್ಯ ಮುಂಬೈನ ಸಾಯನ್ನಲ್ಲಿಯ 2,566.57 ಚ.ಮೀ.ನಿವೇಶನವನ್ನು ಸಹಕಾರಿ ಕ್ಷೇತ್ರದಲ್ಲಿ ತರಬೇತಿ ಕೇಂದ್ರದ ನಿರ್ಮಾಣಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಬ್ಯಾಂಕಿಗೆ ಹಸ್ತಾಂತರಿಸಲು ರವಿವಾರ ಅನುಮತಿ ನೀಡಿದೆ. ಈ ನಿವೇಶನವು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಎಂಎಚ್ಎಡಿಎ)ಕ್ಕೆ ಸೇರಿದ್ದಾಗಿದೆ ಎಂದು indianexpress.com ವರದಿ ಮಾಡಿದೆ.
ಸರಕಾರಿ ಆಸ್ತಿಯನ್ನು ವಿತರಿಸುವಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ನೀತಿಯನ್ನು ತನ್ನ 2014, ಮಾ.20ರ ಆದೇಶದಲ್ಲಿ ಒತ್ತಿ ಹೇಳಿದ್ದ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪನ್ನು ಸರಕಾರಕ್ಕೆ ಸಲ್ಲಿಸಿದ್ದ ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದ ಹಣಕಾಸು ಇಲಾಖೆಯು, ಯಾವುದೇ ಜಾಹೀರಾತನ್ನು ಪ್ರಕಟಿಸದೆ ಪೂರ್ವ ನಿರ್ಧರಿತ ಸದಸ್ಯರಿಗೆ ವರ್ಗಾಯಿಸುವುದನ್ನು ವಿರೋಧಿಸಿತ್ತು. ಗುತ್ತಿಗೆ ಪ್ರಸ್ತಾವವು ರಾಜ್ಯದ ಬೊಕ್ಕಸಕ್ಕೆ ಯಾವುದೇ ಸಂಭಾವ್ಯ ನಷ್ಟಕ್ಕೆ ಪರಿಹಾರವನ್ನು ಉಲ್ಲೇಖಿಸಿಲ್ಲ ಎಂದೂ ಅದು ಬೆಟ್ಟು ಮಾಡಿತ್ತು. ಪ್ರಸ್ತಾವಕ್ಕೆ ಅನುಮೋದನೆ ನೀಡಿದರೆ ಇತರ ನಿಗಮಗಳು ಮತ್ತು ಸಂಸ್ಥೆಗಳೂ ಇಂತಹುದೇ ಅರ್ಜಿಗಳನ್ನು ಸಲ್ಲಿಸುತ್ತವೆ ಎಂದು ಅದು ಎಚ್ಚರಿಕೆಯನ್ನೂ ನೀಡಿತ್ತು.
ಎಂಎಚ್ಎಡಿಎಗೆ ನಷ್ಟವನ್ನು ಸರಿದೂಗಿಸಲು ಬ್ಯಾಂಕು ನಿರ್ಮಾಣವನ್ನು ಪೂರ್ಣಗೊಳಿಸಿದ ನಂತರ ಪ್ರಸ್ತುತ ರೆಡಿ ರೆಕ್ನರ್ (ಸಿದ್ಧ ಕೋಷ್ಟಕ) ದರದ ಆಧಾರದಲ್ಲಿ 24.23 ಕೋ.ರೂ.ಮೌಲ್ಯದ 2,034.55 ಚ.ಮೀ.ಕಟ್ಟಡ ಭಾಗವನ್ನು ಅದಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ. ರೆಡಿ ರೆಕ್ನರ್ ನಿರ್ದಿಷ್ಟ ಪ್ರದೇಶದಲ್ಲಿನ ಆಸ್ತಿಗಳಿಗೆ ರಾಜ್ಯ ಸರಕಾರವು ನಿಗದಿಗೊಳಿಸಿದ ಕನಿಷ್ಠ ಮೌಲ್ಯವನ್ನು ಸೂಚಿಸುತ್ತದೆ.
ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೋರ್ವರ ಪ್ರಕಾರ ರೆಡಿ ರೆಕ್ನರ್ ದರವನ್ನು ಆಧರಿಸಿ ಎಂಎಚ್ಎಡಿಎಗೆ ಪರಿಹಾರವು ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಬಹುದು. ಈ ನಿವೇಶನವನ್ನು ಹರಾಜು ಹಾಕಿದ್ದರೆ ಸರಕಾರವು ರೆಡಿ ರೆಕ್ನರ್ ಮೌಲ್ಯಕ್ಕಿಂತ ಹೆಚ್ಚಿನ ಹಣವನ್ನು ಗಳಿಸಬಹುದಿತ್ತು ಎಂದು ಅವರು ಹೇಳಿದರು.
ಜುಲೈ ಕೊನೆಯ ವಾರದಲ್ಲಿ ಮುಂಬೈನ ಗೋರೆಗಾಂವ್ನಲ್ಲಿಯ ಮೂರು ಎಕರೆ ಜಾಗವನ್ನೂ ಬ್ಯಾಂಕಿಗೆ ಮಂಜೂರು ಮಾಡಲಾಗಿತ್ತು. ಹಿಂದೆ ನಾಗ್ಪುರದ ಮಹಾರಾಷ್ಟ್ರ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿಯು ಮುಂಬೈ ಪಶು ವೈದ್ಯಕೀಯ ಕಾಲೇಜಿನ ಸಬ್ ಕ್ಯಾಂಪಸ್ ಇರುವ ಈ ನಿವೇಶನದ ಒಡೆತನವನ್ನು ಹೊಂದಿತ್ತು. ನಿವೇಶನದ ವರ್ಗಾವಣೆಗಾಗಿ ಸಂಪುಟದ ಅನುಮತಿಯಿಲ್ಲದೆ ಸರಕಾರಿ ನಿರ್ಣಯವನ್ನು ಹೊರಡಿಸಲಾಗಿತ್ತು. ತಪ್ಪಿನ ಅರಿವಾದ ಬಳಿಕ ತಕ್ಷಣವೇ ಈ ನಿರ್ಣಯವನ್ನು ಹಿಂದೆಗೆದುಕೊಳ್ಳಲಾಗಿತ್ತು.