ಮಹಾರಾಷ್ಟ್ರ ಸಿಎಂ ಆಯ್ಕೆ ಇನ್ನೂ ನಿಗೂಢ; ಬಿಜೆಪಿ ಹೈಕಮಾಂಡ್ ಭೇಟಿ ಮಾಡಲಿರುವ ಮಹಾಯುತಿ ನಾಯಕರು
ಎರಡು ಉಪ ಮುಖ್ಯಮಂತ್ರಿ ಹುದ್ದೆ ಮುಂದುವರಿಯುವ ಸಾಧ್ಯತೆ
Photo credit: PTI
ಹೊಸದಿಲ್ಲಿ: ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದ ನಾಯಕರು ಬಿಜೆಪಿ ಉನ್ನತ ನಾಯಕರನ್ನು ಗುರುವಾರ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾಯುತಿ ಮೈತ್ರಿಕೂಟದ ಮೂರು ಪ್ರಮುಖ ಪಕ್ಷಗಳಿಗೂ ಪ್ರಾತಿನಿಧ್ಯ ಒದಗಿಸಲು ಇಬ್ಬರು ಉಪ ಮುಖ್ಯಮಂತ್ರಿಗಳ ಸೂತ್ರ ನೂತನ ಸರಕಾರದಲ್ಲೂ ಮುಂದುವರಿಯುವ ಸಾಧ್ಯತೆ ಇದೆ ಎಂದೂ ವರದಿಯಾಗಿದೆ.
ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯುವ ಸುಳಿವನ್ನು ಬಿಜೆಪಿ ನೀಡಿದ್ದು, ಶಿವಸೇನೆ ಹಾಗೂ ಎನ್ಸಿಪಿ ಪಕ್ಷಗಳಿಗೆ ಉಪ ಮುಖ್ಯಮಂತ್ರಿ ಹುದ್ದೆಗಳು ದೊರೆಯುವ ನಿರೀಕ್ಷೆ ಇದೆ.
ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಹುದ್ದೆ ಕುರಿತ ಊಹಾಪೋಹಗಳಿಗೆ ತೆರೆ ಎಳೆಯುವ ಮೂಲಕ, ಬಿಜೆಪಿ ನಾಯಕರೊಬ್ಬರು ತಮ್ಮ ಉತ್ತರಾಧಿಕಾರಿಯಾಗುವುದಕ್ಕೆ ನಿರ್ಗಮಿತ ಮುಖ್ಯಮಂತ್ರಿ ಏಕನಾಥ್ ಶಿಂದೆ ದಾರಿ ಸುಗಮಗೊಳಿಸಿದ್ದರು. ಈ ಉನ್ನತ ಹುದ್ದೆಗೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ಪಷ್ಟ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ನನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿರುವ ಏಕನಾಥ್ ಶಿಂದೆ, ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.