ಹಿಂದೂಗಳಿಗಾಗಿ ಮಾತ್ರ ಇರುವ ಮಟನ್ ಅಂಗಡಿಗಳಿಗೆ ʼಮಲ್ಹಾರ್' ಪ್ರಮಾಣೀಕರಣ : ಮಹಾರಾಷ್ಟ್ರದ ಸಚಿವ
ಹಿಂದೂಗಳು ಮಲ್ಹಾರ್ ಪ್ರಮಾಣೀಕರಣವಿಲ್ಲದ ಅಂಗಡಿಗಳಿಂದ ಮಟನ್ ಖರೀದಿಸಬಾರದು ಎಂದ ನಿತೇಶ್ ರಾಣೆ

ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ (PTI)
ಮುಂಬೈ : ರಾಜ್ಯದ ಎಲ್ಲಾ ಜಟ್ಕಾ ಮಟನ್ ಅಂಗಡಿಗಳನ್ನು ಹೊಸದಾಗಿ ಪ್ರಾರಂಭಿಸಲಾದ 'ಮಲ್ಹಾರ್' ಪ್ರಮಾಣಪತ್ರದ ಅಡಿಯಲ್ಲಿ ನೋಂದಾಯಿಸಲಾಗುವುದು ಎಂದು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಘೋಷಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಜಟ್ಕಾ ಮಾಂಸ ಪೂರೈಕೆದಾರರಿಗೆ ಪ್ರಮಾಣಪತ್ರ ಪಡೆಯಲು MalharCertification.com ಎಂಬ ಪ್ರಮಾಣೀಕರಣ ವೇದಿಕೆಯನ್ನು ರಚಿಸಲಾಗಿದೆ. ಈ ಮಳಿಗೆಗಳು ಶೇಕಡಾ 100ರಷ್ಟು ಹಿಂದೂಗಳಿಂದ ನಡೆಸಲ್ಪಡಲಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ನಿತೇಶ್ ರಾಣೆ ʼನಾವು ಮಹಾರಾಷ್ಟ್ರದ ಹಿಂದೂ ಸಮುದಾಯದ ಜನರಿಗಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದೇವೆ. ಜಟ್ಕಾ ಮಟನ್ ಮಾರಾಟ ಮಾಡುವ ಮಟನ್ ಅಂಗಡಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಈ ಮಲ್ಹಾರ್ ಪ್ರಮಾಣೀಕರಣವನ್ನು ಹೆಚ್ಚು ಬಳಸಬೇಕು. ಹಿಂದೂಗಳು ಮಲ್ಹಾರ್ ಪ್ರಮಾಣೀಕರಣವಿಲ್ಲದ ಅಂಗಡಿಗಳಿಂದ ಮಟನ್ ಖರೀದಿಸಬಾರದುʼ ಎಂದು ಹೇಳಿದರು.
ಮಲ್ಹಾರ್ ವೆಬ್ಸೈಟ್ ಪ್ರಕಾರ, ಇದು ಜಟ್ಕಾ ಮಟನ್ ಮತ್ತು ಚಿಕನ್ ಮಾರಾಟಗಾರರಿಗೆ ಪ್ರಮಾಣೀಕೃತ ವೇದಿಕೆಯಾಗಿದೆ. ಆಡು ಅಥವಾ ಕುರಿ ಮಾಂಸವನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಹಿಂದೂ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ಇಲ್ಲಿ ಪ್ರಾಣಿಗಳನ್ನು ತ್ಯಾಗ ಮಾಡಿ ಮಾಂಸಗಳನ್ನು ಮಾಡಲಾಗುತ್ತದೆ. ಮಾಂಸವು ತಾಜಾ ಮತ್ತು ಶುದ್ಧವಾಗಿರಲಿದೆ ಮತ್ತು ಯಾವುದೇ ಮಿಶ್ರಣವಿಲ್ಲದೆ ಜಟ್ಕಾ ಮಟನ್ ದೊರೆಯಲಿದೆ ಎಂದು ಉಲ್ಲೇಖಿಸಿದೆ.