ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಬಣ ಸೇರಿದ್ದ ಸಂಸದನಿಗೆ ವಂಚನೆ ಪ್ರಕರಣದಲ್ಲಿ ಕ್ಲೀನ್ ಚಿಟ್!
ಸಂಸದ ರವೀಂದ್ರ ವಾಯ್ಕರ್ (Photo: Facebook/Ravindra Waikar)
ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ಸಂಸದ ರವೀಂದ್ರ ವಾಯ್ಕರ್ ಸೇರ್ಪಡೆಯಾದ ಸುಮಾರು ನಾಲ್ಕು ತಿಂಗಳ ನಂತರ, ಹೋಟೆಲ್ ನಿರ್ಮಾಣದಲ್ಲಿ ಅಕ್ರಮವೆಸಗಲಾಗಿದೆ ಎಂಬ ಆರೋಪ ಎದುರಿಸುತ್ತಿದ್ದ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಮುಕ್ತಾಯ ವರದಿಯನ್ನು ಸಲ್ಲಿಸಿದ್ದಾರೆ ಎಂದು The Indian Express ವರದಿ ಮಾಡಿದೆ.
ಈ ಪ್ರಕರಣವು ಅಪೂರ್ಣ ಮಾಹಿತಿ ಹಾಗೂ ತಪ್ಪು ತಿಳಿವಳಿಕೆಯನ್ನು ಆಧರಿಸಿತ್ತು ಎಂದು ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗವು ನ್ಯಾಯಾಲಯಕ್ಕೆ ತಿಳಿಸಿದೆ.
ಇದಕ್ಕೂ ಮುನ್ನ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣದಲ್ಲಿದ್ದ ವಾಯ್ಕರ್, ಮಾರ್ಚ್ 10ರಂದು ಶಿಂದೆ ಬಣಕ್ಕೆ ಸೇರ್ಪಡೆಯಾಗಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ) ಬಣದ ಅಭ್ಯರ್ಥಿ ಅಮೋಲ್ ಕೀರ್ತಿಕರ್ ವಿರುದ್ಧದ ನಿಕಟ ಸ್ಪರ್ಧೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ರವೀಂದ್ರ ವಾಯ್ಕರ್ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಲಾಗಿದೆ ಎಂದು ಆರೋಪಿಸಿ, ಅವರ ಗೆಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.
ಬೃಹನ್ ಮುಂಬೈ ಮಹಾನಗರ ಪಾಲಿಕೆಯೊಂದಿಗಿನ ಒಡಂಬಡಿಕೆಯನ್ನು ಉಲ್ಲಂಘಿಸಿ, ಮುಂಬೈ ನಗರದ ಜೋಗೇಶ್ವರಿ ಪ್ರದೇಶದಲ್ಲಿ ಅಕ್ರಮವಾಗಿ ಹೋಟೆಲ್ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗವು ವಾಯ್ಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ವಾಯ್ಕರ್ ರೊಂದಿಗೆ ಅವರ ಪತ್ನಿ ಮನಿಷಾ ಹಾಗೂ ಅವರ ಸಹಚರರಾದ ಆಸೂ ನೆಹ್ಲಾನೈ, ರಾಜ್ ಲಾಲ್ ಚಂದಾನಿ, ಪೃಥ್ ಪಾಲ್ ಬೃಂದಾ ಹಾಗೂ ಅರುಣ್ ದುಬೆ ವಿರುದ್ಧವೂ ಪ್ರಕರಣ ದಾಖಲಾಗಿತ್ತು.