ಮಹಾರಾಷ್ಟ್ರ: ಮಹಾಯುತಿ ಸರಕಾರದಲ್ಲಿ ʼ6-1ʼ ಸೂತ್ರದಲ್ಲಿ ಅಧಿಕಾರ ಹಂಚಿಕೆ: ವರದಿ
Photo credit: PTI
ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಪಡ್ನವೀಸ್ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಸಚಿವ ಸ್ಥಾನ ಹಂಚಿಕೆ ಪ್ರಕ್ರಿಯೆಯೂ ನಡೆದಿದ್ದು, 6-1 ಸೂತ್ರವನ್ನು ಆಧರಿಸಲಾಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಮೂಲಗಳ ಪ್ರಕಾರ ಅಧಿಕಾರ ಹಂಚಿಕೆಯು 6-1 ಸೂತ್ರವನ್ನು ಆಧರಿಸಿದೆ. ಅಂದರೆ ಪ್ರತಿ ಆರು ಶಾಸಕರಿಗೆ ಒಂದು ಸಚಿವ ಸ್ಥಾನವನ್ನು ನೀಡಲಾಗುತ್ತದೆ.
6-1 ಸೂತ್ರದ ಪ್ರಕಾರ, 132 ಸ್ಥಾನಗಳನ್ನು ಗೆದ್ದ ಬಿಜೆಪಿ, ಗರಿಷ್ಠ ಸಂಖ್ಯೆಯ ಸಚಿವ ಸ್ಥಾನಗಳನ್ನು ಅಂದರೆ 20 ರಿಂದ 22 ಸಚಿವ ಸ್ಥಾನಗಳನ್ನು ಪಡೆಯಲಿದೆ. ʼಮಹಾಯುತಿʼ ಮೈತ್ರಿಕೂಟದ ಇತರ ಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 12 ಸ್ಥಾನಗಳನ್ನು ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ 9 ರಿಂದ10 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.
ಆದರೆ ಖಾತೆ ಹಂಚಿಕೆ ಕುರಿತು ಇನ್ನು ಕೂಡ ಅಂತಿಮವಾಗಿಲ್ಲ. ದೇವೇಂದ್ರ ಫಡ್ನವೀಸ್ ವರ್ಷಗಳಿಂದ ನಿರ್ವಹಿಸುತ್ತಿರುವ ಗೃಹ ಖಾತೆಯ ಮೇಲೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಈ ಬಾರಿ ಕಣ್ಣಿಟ್ಟಿದೆ. ಡಿಸಿಎಂ ಸ್ಥಾನವನ್ನು ಒಪ್ಪಿಕೊಳ್ಳಬೇಕಿದ್ದರೆ, ಗೃಹ ಖಾತೆಯನ್ನು ನೀಡಬೇಕು ಎಂದು ಶಿಂಧೆ ಬಣ ಬೇಡಿಕೆ ಮುಂದಿಟ್ಟಿದೆ. ಇದಲ್ಲದೆ ಅಜಿತ್ ಪವಾರ್ ಅವರ ಎನ್ ಸಿಪಿ ಕೂಡ ಹೊಸ ಸರ್ಕಾರದಲ್ಲಿ ಶಿಂಧೆ ಬಣಕ್ಕೆ ಸಮನಾದ ಪಾಲು ನೀಡಬೇಕೆಂದು ಒತ್ತಾಯಿಸಿದೆ ಎನ್ನಲಾಗಿದೆ.