ಮಹಾರಾಷ್ಟ್ರದ ‘ಹಿಂದೀಕರಣ’ಕ್ಕೆ ಅವಕಾಶ ನೀಡುವುದಿಲ್ಲ: ರಾಜ್ ಠಾಕ್ರೆ
ಎನ್ಇಪಿ ಮೂಲಕ ಹಿಂದಿ ಭಾಷೆ ಹೇರಿಕೆಗೆ ವಿರೋಧ
Image Source : PTI
ಹೊಸದಿಲ್ಲಿ: 2020ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯ ಜಾರಿಯ ಭಾಗವಾಗಿ ದೇಶಾದ್ಯಂತ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ಗುರುವಾರ ವಿರೋಧಿಸಿದ್ದಾರೆ. ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿರುವ ಅವರು, ಯಾವುದೇ ರೀತಿಯ ಬಲವಂತವನ್ನು ತನ್ನ ಪಕ್ಷ ಸಹಿಸಲಾರದು ಹಾಗೂ ಮಹಾರಾಷ್ಟ್ರವನ್ನು ಹಿಂದೀಕರಣಗೊಳಿಸಲು ಕೇಂದ್ರ ಸರಕಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಅವರು ಹೇಳಿದ್ದಾರೆ.
‘‘ನಾವು ಹಿಂದಿ ಭಾಷಿಕರಲ್ಲ. ಒಂದು ವೇಳೆ ನೀವು ಮಹಾರಾಷ್ಟ್ರದಲ್ಲಿ ಹಿಂದಿ ಭಾಷೆಗೆ ಮಣೆಹಾಕಲು ಯತ್ನಿಸಿದಲ್ಲಿ ಸಂಘರ್ಷಕ್ಕಿಳಿಯಬೇಕಾಗುತ್ತದೆ. ಇಂತಹ ಸಂಘರ್ಷವನ್ನು ಹುಟ್ಟುಹಾಕಲು ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದೆಯೆಂಬುದು ಮನವರಿಕೆಯಾಗುತ್ತದೆ. ಮುಂಬರುವ ಚುನಾವಣೆಗಳಲ್ಲಿ ಮರಾಠಿ ಹಾಗೂ ಮರಾಠಿಯೇತರರ ನಡುವೆ ಸಂಘರ್ಷವನ್ನು ಸೃಷ್ಟಿಸಿ, ಅದರ ಪ್ರಯೋಜನವನ್ನು ಪಡೆಯುವ ಇದಾಗಿದೆಯೇ? ಎಂದು ರಾಜ್ ಠಾಕ್ರೆ ‘ಎಕ್ಸ್’ನಲ್ಲಿನ ಪೋಸ್ಟ್ನಲ್ಲಿ ಬರೆದಿದ್ದಾರೆ. ಹಿಂದಿ ರಾಷ್ಟ್ರಭಾಷೆಯಲ್ಲವೆಂದು ಪ್ರತಿಪಾದಿಸಿದ ಅವರು, ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲೇ ಹಿಂದಿಯನ್ನು ಕಲಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
‘‘ನೀವು ಯಾವುದೇ ರೀತಿಯ ತ್ರಿಭಾಷಾ ಸೂತ್ರಗಳನ್ನು ಹೊಂದಿದ್ದರೂ, ಅದನ್ನು ಸರಕಾರಿ ವ್ಯವಹಾರಗಳಿಗೆ ಸೀಮಿತಗೊಳಿಸಿ, ಶಿಕ್ಷಣಕ್ಕೆ ತರಬೇಡಿ. ಈ ದೇಶದಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ ಮಹಾರಾಷ್ಟ್ರದಲ್ಲಿ ನೀವು ಇನ್ನೊಂದು ಪ್ರಾಂತದ ಭಾಷೆಯನ್ನು ಯಾಕೆ ಹೇರಲು ಆರಂಭಿಸಿದ್ದೀರಿ? ಹಿಂದಿ ಹೇರಿಕೆಯ ಮೂಲಕ ಭಾಷಾವಾರು ಪ್ರಾಂತದ ತತ್ವವನ್ನು ಕಡೆಗಣಿಸಲಾಗಿದೆ ಎಂದು ರಾಜ್ ಠಾಕ್ರೆ ಎಕ್ಸ್ನಲ್ಲಿ ಬರೆದಿದ್ದಾರೆ.
2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ಬಳಿಕ 2025-26ನೇ ಶೈಕ್ಷಣಿಕ ವರ್ಷದಲ್ಲಿ 1ರಿಂದ 5ನೇ ತರಗತಿವರೆಗಿನ ಮರಾಠಿ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ.