ಮಹಾರಾಷ್ಟ್ರ: ಶಿಂಧೆ ಬಣದ ಅನರ್ಹತೆ ಅರ್ಜಿ 14 ಶಾಸಕರು, ಸ್ಪೀಕರ್ ಗೆ ಹೈಕೋರ್ಟ್ ನೋಟಿಸ್
ಉದ್ದವ್ ಠಾಕ್ರೆ | Photo: PTI
ಹೊಸದಿಲ್ಲಿ: ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಸಲ್ಲಿಸಿದ ಅರ್ಜಿಯ ಕುರಿತಂತೆ ಬಾಂಬೆ ಉಚ್ಚ ನ್ಯಾಯಾಲಯ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ಹಾಗೂ ಉದ್ದವ್ ಠಾಕ್ರೆ ಬಣದ 14 ಶಾಸಕರಿಗೆ ಬುಧವಾರ ನೋಟಿಸು ಜಾರಿ ಮಾಡಿದೆ.
ಠಾಕ್ರೆ ಬಣದ ಶಾಸಕರನ್ನು ಅನರ್ಹಗೊಳಿಸದ ನಾರ್ವೇಕರ್ ಅವರ ನಿರ್ಧಾರದ ವಿರುದ್ಧ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಈ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಹಾಗೂ ಫಿರ್ದೋಶ್ ಪೂನಿವಾಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಮಹಾರಾಷ್ಟ್ರ ಶಾಸಕಾಂಗದ ಕಾರ್ಯದರ್ಶಿಗೆ ಕೂಡ ನೋಟಿಸು ಜಾರಿ ಮಾಡಿದೆ. ಅಲ್ಲದೆ, ಎಲ್ಲಾ ಪ್ರತಿವಾದಿಗಳು ಫೆಬ್ರವರಿ 8ರ ಒಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಜನವರಿ 10 ರಂದು ನಾರ್ವೇಕರ್ ಅವರು ಏಕನಾಥ ಶಿಂದೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ತೀರ್ಪು ನೀಡಿದ್ದರು. ಆದರೆ, ಉಭಯ ಬಣಗಳ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಯನ್ನು ತಿರಸ್ಕರಿಸಿದ್ದರು. ಶಿವಸೇನೆಯ ಸಂವಿಧಾನ ‘‘ಪಕ್ಷ ಪ್ರಮುಖ್’’ ಅಥವಾ ಪಕ್ಷದ ಮುಖ್ಯಸ್ಥರ ಹುದ್ದೆಯನ್ನು ಉಲ್ಲೇಖಿಸದೇ ಇರುವುದರಿಂದ ಪಕ್ಷದಿಂದ ಯಾರನ್ನೂ ತೆಗೆದು ಹಾಕುವ ಅಧಿಕಾರ ಉದ್ಧವ್ ಠಾಕ್ರೆ ಅವರಿಗೆ ಇಲ್ಲ ಎಂದು ಸ್ವೀಕರ್ ಹೇಳಿದ್ದರು.
ನಾರ್ವೇಕರ್ ಅವರ ಈ ತೀರ್ಪಿನ ವಿರುದ್ಧ ಶಿಂದೆ ನೇತೃತ್ವದ ಬಣದ ಮುಖ್ಯ ಸಚೇತಕ ಭರತ್ ಗೋಗಾವಲೆ ಅವರು ಅರ್ಜಿ ಸಲ್ಲಿಸಿದ್ದಾರೆ. ಗೋಗವಾಲೆ ಅವರು ಅರ್ಜಿಯಲ್ಲಿ ಸ್ವೀಕರ್ ಆದೇಶದ ‘‘ಕಾನೂನು ಬದ್ಧತೆ, ಔಚಿತ್ಯ ಹಾಗೂ ಸಮಪರ್ಕಕತೆ’’ ಕುರಿತು ಪ್ರಶ್ನೆ ಎತ್ತಿದ್ದಾರೆ. ವಿಧಾನ ಸಭೆಯಲ್ಲಿ 2022 ಜುಲೈ 4ರಂದು ನಡೆಯುವ ವಿಶ್ವಾಸ ಮತದ ಸಂದರ್ಭ ಶಿಂದೆ ಸರಕಾರದ ಪರವಾಗಿ ಮತ ಚಲಾಯಿಸುವಂತೆ 2022 ಜುಲೈ 3ರಂದು ತಾನು ಶಿವಸೇನೆಯ ಎಲ್ಲ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದೆ. ಆದರೆ, 14 ಶಾಸಕರು ವಿಪ್ ಅನ್ನು ಉಲ್ಲಂಘಿಸಿದಿದ್ದಾರೆ ಎಂದು ಅವರು ಹೇಳಿದ್ದಾರೆ.
2022 ಜೂನ್ ನಲ್ಲಿ ಶಿವಸೇನೆ ವಿಭಜನೆಯಾದ ಬಳಿಕ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಬಣ ‘‘ನಿಜವಾದ ರಾಜಕೀಯ ಪಕ್ಷ’’ ಎಂದು ಮಹಾರಾಷ್ಟ್ರ ವಿಧಾನ ಸಭೆ ಸ್ವೀಕರ್ ನೀಡಿದ ತೀರ್ಪು ಪ್ರಶ್ನಿಸಿ ಶಿವಸೇನೆಯ ಉದ್ದವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಜನವರಿ 22ಕ್ಕೆ ಮುಂದೂಡಿದೆ.