ಮಹಾರಾಷ್ಟ್ರ | ಶಾಹು ಮಹಾರಾಜ 1915ರಲ್ಲಿ ನಿರ್ಮಿಸಿದ್ದ ಸಭಾಂಗಣ ಬೆಂಕಿಗಾಹುತಿ
ಸಾಂದರ್ಭಿಕ ಚಿತ್ರ
ಕೊಲ್ಹಾಪುರ : ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿರುವ 100 ವರ್ಷಕ್ಕೂ ಅಧಿಕ ಹಳೆಯ ಸಭಾಂಗಣ ಬೆಂಕಿಗಾಹುತಿಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕೊಲ್ಹಾಪುರದಲ್ಲಿ ಕಲೆ ಹಾಗೂ ನಾಟಕಗಳ ಸಂಕೇತವಾಗಿರುವ ಸಭಾಂಗಣ ‘ಕೇಶವರಾವ್ ಭೋಸಾಲೆ ನಾಟ್ಯಗೃಹ’ ಗುರುವಾರ ರಾತ್ರಿ ಬೆಂಕಿಗಾಹುತಿಯಾಗಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಭಾಂಗಣವನ್ನು 1915ರಲ್ಲಿ ಛತ್ರಪತಿ ಸಾಹು ಮಹಾರಾಜ ಅವರು ನಿರ್ಮಾಣ ಮಾಡಿದ್ದರು.
ಬೆಂಕಿ ಅನಾಹುತ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
‘‘ಗುರುವಾರ ರಾತ್ರಿ 9.45ಕ್ಕೆ ಬೆಂಕಿ ಕಾಣಿಸಿಕೊಂಡಿತು. ಕರೆಯ ಹಿನ್ನೆಲೆಯಲ್ಲಿ ಅಗ್ನಿ ಶಾಮಕ ದಳ ಹಾಗೂ ನೀರಿನ ಟ್ಯಾಂಕರ್ಗಳು ಘಟನಾ ಸ್ಥಳಕ್ಕೆ ಧಾವಿಸಿದವು ಹಾಗೂ ಬೆಂಕಿಯನ್ನು ನಂದಿಸಿದವು’’ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಕೊಲ್ಹಾಪುರದ ಉಸ್ತುವಾರಿ ಸಚಿವ ಹಸನ್ ಮುಶ್ರಿಫ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಹಾಗೂ ಘಟನೆ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
‘‘ರಾಜರ್ಷಿ ಛತ್ರಪತಿ ಶಾಹು ಮಹಾರಾಜ ಅವರು 109 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಸಭಾಂಗಣ ಬೆಂಕಿಗಾಹುತಿಯಾಗಿರುವುದು ದುರಾದೃಷ್ಟಕರ. ಸಭಾಂಗಣ ಈ ರೀತಿ ನಾಶವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರ ಕಾಮಗಾರಿಗೆ 10 ಕೋ. ರೂ ಅನುದಾನ ನೀಡಿದ ಬಳಿಕ ಈ ಸಭಾಂಗಣವನ್ನು ನವೀಕರಣಗೊಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.