ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಯುಪಿಎಸ್ ಜಾರಿ: ಮಹಾರಾಷ್ಟ್ರ ನಿರ್ಧಾರ
ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: ಎಲ್ಲ ರಾಜ್ಯ ಸರ್ಕಾರಗಳು ಕೂಡಾ ತಮ್ಮ ಉದ್ಯೋಗಿಗಳಿಗೆ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಬೆನ್ನಲ್ಲೇ, ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರ, ಯೋಜನೆ ಜಾರಿಗೆ ನಿರ್ಧಾರ ಕೈಗೊಂಡಿದೆ. ಈ ಯೋಜನೆ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರ ಪಾತ್ರವಾಗಿದ್ದು, ಎನ್ ಡಿಎ ಆಡಳಿತದ ಇತರ ರಾಜ್ಯಗಳು ಇದನ್ನು ಅನುಸರಿಸುವ ಸ್ಪಷ್ಟ ಸೂಚನೆ ಇದಾಗಿದೆ.
ಹಣದುಬ್ಬರದ ಹೊಂದಾಣಿಕೆ ಮತ್ತು ಇತರ ಬೇಡಿಕೆಗಳು ಸೇರಿದಂತೆ 2004 ಮತ್ತು ಆ ಬಳಿಕ ಸೇರ್ಪಡೆಯಾದ ಉದ್ಯೋಗಿಗಳ ಕೊನೆಯ 12 ತಿಂಗಳ ಸರಾಸರಿ ವೇತನದ ಶೇಕಡ 50ರಷ್ಟನ್ನು ಪಿಂಚಣಿಯಾಗಿ ನೀಡುವ ಈ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ 24 ಗಂಟೆಗಳೊಳಗೆ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ದೇಶಾದ್ಯಂತ 23 ಲಕ್ಷ ಕೇಂದ್ರ ಸರ್ಕಾರಿ ನೌಕರರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದು, ಯೋಜನೆಯನ್ನು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿದರೆ ಒಟ್ಟು 90 ಲಕ್ಷ ಉದ್ಯೋಗಿಗಳಿಗೆ ನೆರವಾಗಲಿದೆ. ರಾಜ್ಯ ಸರ್ಕಾರಗಳೂ ಇದನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಿ ನೌಕರರ ಸಂಘ ಕರೆ ನೀಡಿದ್ದು, ರಾಜಕೀಯ ಪಕ್ಷಗಳು ಇದನ್ನು ರಾಜಕೀಯಗೊಳಿಸಬಾರದು ಎಂದು ಮನವಿ ಮಾಡಿದೆ. ಪಿಂಚಣಿ ಯೋಜನೆಗೆ ಉದ್ಯೋಗಿಗಳು ದೇಣಿಗೆ ನೀಡುವ ಅಗತ್ಯವಿಲ್ಲ. ಆದ್ದರಿಂದ ಈ ಯೋಜನೆ ತೃಪ್ತಿದಾಯಕ ಹಾಗೂ ಇರುವ ಅತ್ಯುತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿವೆ.
ಉದ್ಯೋಗಿಗಳು ಉತ್ತಮವಾದ ಏನನ್ನು ಪಡೆಯಬಹುದು ಮತ್ತು ಸರ್ಕಾರ ಏನು ಒದಗಿಸಬಹುದು ಎನ್ನುವಾಗ ನಾವು ಪ್ರಾಯೋಗಿಕತೆಯನ್ನು ನೋಡಬೇಕಾಗುತ್ತದೆ. ಯುಪಿಎಸ್ ಯೋಜನೆ ಹಿಂದಿನ ಓಪಿಎಸ್ ನ ಶೇಕಡ 90ರಷ್ಟು ಅಂಶಗಳನ್ನು ಒಳಗೊಳ್ಳುತ್ತದೆ. ಈ ಬಗ್ಗೆ ನಮಗೆ ಸಂತಸವಿದೆ. ಯುಪಿಎಸ್ ನಲ್ಲಿ ಉದ್ಯೋಗಿಗಳ ಮಾಸಿಕ ದೇಣಿಗೆಯಿಂದ ನಿವೃತ್ತರಾಗುವ ವೇಳೆಗೆ ದೊಡ್ಡ ಮೊತ್ತವನ್ನು ನೀಡುವ ಸಂಬಂಧ ಸರ್ಕಾರ ಕಾರ್ಯಯೋಜನೆ ರೂಪಿಸುತ್ತಿದೆ" ಎಂದು ಅಖಿಲ ಭಾರತೀಯ ರೈಲ್ವೆ ಉದ್ಯೋಗಿಗಳ ಒಕ್ಕೂಟದ ಮುಖಂಡ ಹಾಗೂ ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಹೇಳಿದ್ದಾರೆ.