ಮಹಾರಾಷ್ಟ್ರ: ಬಿಜೆಪಿ ನಾಯಕನಿಂದ ಬುಡಕಟ್ಟು ವ್ಯಕ್ತಿಗೆ ನಿಂದನೆ, ಥಳಿತ
ಸಾಂದರ್ಭಿಕ ಚಿತ್ರ
ಪಾಲ್ಘಾರ್: ಬುಡಕಟ್ಟು ಸಮುದಾಯದ 57 ವರ್ಷದ ವ್ಯಕ್ತಿಗೆ ಬಿಜೆಪಿಯ ಸ್ಥಳೀಯ ನಾಯಕ ಹಾಗೂ ಇತರ ಮೂವರು ಥಳಿಸಿದ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ.
ಬಿಜೆಪಿಯ ಪಾಲ್ಘಾರ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೂತನವಾಗಿ ನೇಮಕರಾದ ಭರತ್ ರಜಪೂತ್ ಈ ಪ್ರಕರಣದ ಪ್ರಧಾನ ಆರೋಪಿ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ದೂರುದಾರ ನವಪಾಡ ಗ್ರಾಮದ ನಿವಾಸಿ. ಅಲ್ಲದೆ, ಅವರು ಆದಿವಾಸಿ ವರ್ಲಿ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ಸಂಸ್ಥೆಯೊಂದು ಆಗಸ್ಟ್ 4ರಂದು ದೂರುದಾರನಾಗಿರುವ ರೈತ ಹಾಗೂ ಸಾಮಾಜಿಕ ಕಾರ್ಯಕರ್ತನನ್ನು ಭೇಟಿ ಮಾಡಿತ್ತು. ಅಲ್ಲದೆ ಗ್ರಾಮದ ರಸ್ತೆ ಹಾಗೂ ನೀರಿನ ಸಮಸ್ಯೆಗಳನ್ನು ಮಂಡಿಸಲು ಆಹ್ವಾನಿಸಿತ್ತು.
ಅದರಂತೆ ಅವರು ಸಂಘಟನೆಯೊಂದಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅನಂತರ ಆ ಬುಡಕಟ್ಟು ವ್ಯಕ್ತಿ ಭರತ್ ರಜಪೂತ್ನಿಂದ ಕರೆ ಸ್ವೀಕರಿಸಿದ್ದರು. ಭರತ್ ರಜಪೂತ್ ಅವರಿಗೆ ತನ್ನನ್ನು ಕಚೇರಿಯಲ್ಲಿ ಭೇಟಿಯಾಗುವಂತೆ ತಿಳಿಸಿದ್ದರು. ಅವರು ಇತರ ಸಂಘಟನೆಯ ಸದಸ್ಯರೊಂದಿಗೆ ತನ್ನ ಕಚೇರಿಗೆ ಆಗಮಿಸಿರುವುದಕ್ಕೆ ಭರತ್ ರಜಪೂತ್ ಆಕ್ರೋಶಿತರಾದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಭರತ್ ರಜಪೂತ್ ಹಾಗೂ ಇತರರ ಆರೋಪಿಗಳು ದೂರುದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅವರ ಜಾತಿ ನಿಂದನೆ ಮಾಡಿದರು ಹಾಗೂ ಥಳಿಸಿದರು. ಅಲ್ಲದೆ, ಘೋರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭರತ್ ರಜಪೂತ್ ಹಾಗೂ ಇತರ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 506, ಇತರ ಸಂಬಂಧಿತ ನಿಯಮಗಳ ಅಡಿ ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಎಫ್ಐಆರ್ನಲ್ಲಿ ಹೆಸರಿಸಲಾದ ಇತರ ಆರೋಪಿಗಳೆಂದರೆ, ಭರತ್ ರಜಪೂತ್ ಸಹೋದರ ಜಗದೀಶ್, ವಿಶಾಲ್ ನಂದಾಲ್ಸಕರ್ ಹಾಗೂ ರಾಜೇಶ್ ಠಾಕೂರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.