ಮಹಾರಾಷ್ಟ್ರ, ಪಶ್ಚಿಮ ಬಂಗಾಳ: ಮೋದಿ ಪ್ರಚಾರ ಮಾಡಿದ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು
PC : PTI
ಹೊಸದಿಲ್ಲಿ: ಮೋದಿ ಅಲೆಯೂ ಇಲ್ಲ, ಆಟವೂ ನಡೆಯುತ್ತಿಲ್ಲ ಎನ್ನುವುದು ಈ ಚುನಾವಣೆಯಲ್ಲಿ ಬಟಾ ಬಯಲಾಗಿದೆ. 2024ರ ಚುನಾವಣೆಯಲ್ಲಿ ಮೋದಿ ರ್ಯಾಲಿ ನಡೆಸಿದ್ದ ಕ್ಷೇತ್ರಗಳಲ್ಲಿಯೇ ಬಿಜೆಪಿ ಹೆಚ್ಚು ಸೀಟುಗಳನ್ನು ಕಳೆದುಕೊಂಡಿರುವುದು ಮೋದಿ ಮ್ಯಾಜಿಕ್ ಮುಗಿದಿದೆ ಎನ್ನುವುದಕ್ಕೆ ದೊಡ್ಡ ನಿದರ್ಶನ.
ಮುಖ್ಯವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಹು ದೊಡ್ಡ ಆಘಾತ ಅನುಭವಿಸಿದೆ. ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಿ, ಶಿವಸೇನೆ ಮತ್ತು ಎನ್ಸಿಪಿಯನ್ನು ಒಡೆದು ಅಧಿಕಾರ ಹಿಡಿದಿದ್ದ ಬಿಜೆಪಿ, 2024ರ ಲೋಕಸಭೆ ಚುನಾವಣೆಯಲ್ಲಿ ತಕ್ಕ ಶಾಸ್ತಿ ಅನುಭವಿಸಬೇಕಾಯಿತು.
ಮಹಾರಾಷ್ಟ್ರದಲ್ಲಿ ಎಲ್ಲೆಲ್ಲಿ ಮೋದಿ ಪ್ರಚಾರ ನಡೆಸಿದ್ದರೊ ಅಲ್ಲೇ ಬಿಜೆಪಿಗೆ ಹೆಚ್ಚು ಸೀಟುಗಳ ನಷ್ಟವಾಗಿದೆ. ಅಂಕಿಅಂಶಗಳ ಪ್ರಕಾರ, ಮೋದಿ ಮಹಾರಾಷ್ಟ್ರದ 18 ಲೋಕಸಭಾ ಸ್ಥಾನಗಳಲ್ಲಿ ರ್ಯಾಲಿಗಳನ್ನು ನಡೆಸಿದ್ದರು. ಆದರೆ ಅವರ ಪ್ರಚಾರದ ಹೊರತಾಗಿಯೂ ಬಿಜೆಪಿ ನೇತೃತ್ವದ ಎನ್ಡಿಎ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ವಿಫಲವಾಯಿತು. ಮಹಾರಾಷ್ಟ್ರದಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನವು ಮುಂದೆ ನಡೆಯಬೇಕಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅದಕ್ಕೆ ಆತಂಕ ತಂದಿದೆ.
2019ರ ಚುನಾವಣೆಯಲ್ಲಿ 23 ಸ್ಥಾನಗಳನ್ನು ಮಹಾರಾಷ್ಟ್ರದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಗೆದ್ದಿರುವುದು 9 ಸ್ಥಾನಗಳನ್ನು ಮಾತ್ರ. ಮೋದಿ ಪ್ರಚಾರ ನಡೆಸಿದ ಬಹುತೇಕ ಸ್ಥಾನಗಳಲ್ಲಿ ಎನ್ಡಿಎ ಗೆಲುವು ಸಾಧಿಸಲು ವಿಫಲವಾಗಿದೆ. ಮಹಾರಾಷ್ಟ್ರದ 18 ಲೋಕಸಭಾ ಕ್ಷೇತ್ರಗಳಲ್ಲಿ ಮೋದಿ ಅನೇಕ ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದರು. ಅದರಲ್ಲಿ 15 ಸ್ಥಾನಗಳಲ್ಲಿ ಎನ್ಡಿಎ ಸೋಲು ಕಂಡಿದೆ. ಮುಂಬೈನ 6 ಲೋಕಸಭಾ ಕ್ಷೇತ್ರಗಳಲ್ಲಿ ಮೋದಿ ರ್ಯಾಲಿ ನಡೆದಿದ್ದವು. ಆದರೆ ಎನ್ಡಿಎ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿದೆ. ಮುಂಬೈ ಉತ್ತರ ಮತ್ತು ಮುಂಬೈ ವಾಯವ್ಯ ಕ್ಷೇತ್ರಗಳಲ್ಲಿ ಮಾತ್ರವೇ ಗೆಲುವು ಸಾಧ್ಯವಾಯಿತು.
ಮುಂಬೈ ಈಶಾನ್ಯ ಲೋಕಸಭಾ ಕ್ಷೇತ್ರದ ಘಾಟ್ಕೋಪರ್ ಪ್ರದೇಶದಲ್ಲಿ ಮೋದಿ ರೋಡ್ಶೋ ನಡೆಸಿದ್ದರು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ಎದುರು ಸೋಲು ಕಾಣಬೇಕಾಯಿತು. ಹಾಗೆಯೇ ನಾಸಿಕ್ ನಲ್ಲಿ ಶಿವಸೇನೆ ಶಿಂಧೆ ಬಣದ ಪರವಾಗಿ ಮೋದಿ ರ್ಯಾಲಿ ನಡೆಸಿದ್ದರು. ಆದರೆ ಅಲ್ಲಿ ಶಿವಸೇನೆ ಠಾಕ್ರೆ ಬಣದೆದುರು ಸೋಲಾಯಿತು.
ನಾಂದೇಡ್ನಲ್ಲಿಯೂ ಮೋದಿ ಮ್ಯಾಜಿಕ್ ನಡೆದಿಲ್ಲ. ಅಲ್ಲಿ ಕಾಂಗ್ರೆಸ್ ಎದುರಲ್ಲಿ ಬಿಜೆಪಿಯ ಎಂಪಿಯಾಗಿದ್ದ ಅಭ್ಯರ್ಥಿ ಸೋಲು ಕಂಡಿದ್ದಾರೆ.
ಚಂದ್ರಾಪುರದಲ್ಲಿಯೂ ಮೋದಿ ಯಾರ ಪರವಾಗಿ ಪ್ರಚಾರ ನಡೆಸಿದ್ದರೊ ಆ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಯೆದುರು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಬೇಕಾಯಿತು. ರಾಮ್ಟೆಕ್ನಲ್ಲಿ ಕೂಡ ಶಿಂಧೆ ಶಿವಸೇನೆ ಪರವಾಗಿ ಮೋದಿ ಪ್ರಚಾರ ಪ್ರಯೋಜನಕ್ಕೆ ಬರದೇ ಹೋಯಿತು. ಎನ್ಸಿಪಿ ಶರದ್ ಪವಾರ್ ಬಣದೆದುರು ಸೋಲಾಯಿತು.
ವಾರ್ಧಾದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮೋದಿ ಮತ ಯಾಚಿಸಿದರೂ ಎನ್ಸಿಪಿ ಶರದ್ ಪವಾರ್ ಬಣದೆದುರು ಸೋಲಾಯಿತು. ಇನ್ನು ಪಶ್ಚಿಮ ಬಂಗಾಳ ಕೂಡ ಬಿಜೆಪಿಗೆ ಕೊಟ್ಟ ಆಘಾತ ಸಣ್ಣದಲ್ಲ. ಬಂಗಾಳದ 27 ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳುವಂತೆ ಮೋದಿ 23 ರ್ಯಾಲಿಗಳು ಮತ್ತು ರೋಡ್ಶೋಗಳನ್ನು ನಡೆಸಿದ್ದರು. ಆದರೆ ಬಿಜೆಪಿ 20 ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ಇಲ್ಲಿ 18 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 6 ಸ್ಥಾನಗಳನ್ನು ಕಳೆದುಕೊಂಡಿದೆ.
ಮಾರ್ಚ್ 1 ರಿಂದಲೇ ಮೋದಿ ಈ ರಾಜ್ಯದಲ್ಲಿ ಪ್ರಚಾರ ಶುರು ಮಾಡಿದ್ದರು. ಹೂಗ್ಲಿಯ ಅರಂಬಾಗ್ನಲ್ಲಿ ಬಿಜೆಪಿಯ ಮೊದಲ ವಿಜಯ್ ಸಂಕಲ್ಪ್ ರ್ಯಾಲಿ ನಡೆದಿತ್ತು. ಮೇ 29ರಂದು ಕೋಲ್ಕತ್ತಾದಲ್ಲಿ ಮೆಗಾ ರೋಡ್ಶೋ ಮೂಲಕ ಮೂರು ತಿಂಗಳ ಅವಧಿಯ ಪ್ರಚಾರವನ್ನು ಕೊನೆಗೊಳಿಸಿದ್ದರು. ಆದರೆ ಮೋದಿ ಪ್ರಚಾರದ ಹೊರತಾಗಿಯೂ 2019ರಲ್ಲಿ ಗೆದ್ದ ಕೂಚ್ಬೆಹಾರ್, ಬಂಕುರಾ, ಮೇದಿನಿಪುರ್, ಬ್ಯಾರಕ್ಪೋರ್ ಮತ್ತು ಜಾರ್ಗ್ರಾಮ್ ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ವಿಫಲವಾಗಿದೆ.
ಮಹುವಾ ಮೊಯಿತ್ರಾ ಅವರು ಗೆದ್ದ ಕೃಷ್ಣಾನಗರ ಕ್ಷೇತ್ರದಲ್ಲಂತೂ ಮೋದಿ ಎರಡೆರಡು ಬಾರಿ ಪ್ರಚಾರ ನಡೆಸಿದ್ದರು. ಆದರೆ ಮಹುವಾ ಮೋಯಿತ್ರಾ ಗೆಲುವನ್ನು ತಡೆಯುವುದು ಮೋದಿಗೆ ಸಾಧ್ಯವಾಗಲಿಲ್ಲ. ಮೋದಿ ತೀವ್ರ ಪ್ರಚಾರದ ಹೊರತಾಗಿಯೂ ದಕ್ಷಿಣ ಬಂಗಾಳದಲ್ಲಿ ಟಿಎಂಸಿ ಪ್ರಾಬಲ್ಯವನ್ನು ಮುರಿಯಲು ಬಿಜೆಪಿ ವಿಫಲವಾಗಿದೆ ಎಂಬುದನ್ನು ಫಲಿತಾಂಶಗಳು ತೋರಿಸಿವೆ.
ಮೋದಿ ಚುನಾವಣಾ ಪ್ರಚಾರ ನಡೆಸಿದ ಪ್ರದೇಶದಲ್ಲಿಯೇ ಬಿಜೆಪಿ ಬಹುತೇಕ ಸ್ಥಾನಗಳನ್ನು ಕಳೆದುಕೊಂಡಿದೆ. ಇವುಗಳಲ್ಲಿ ಅರಂಬಾಗ್, ಹೂಗ್ಲಿ, ಬರಾಸತ್, ಬೋಲ್ಪುರ್, ಬರಾಕ್ಪೋರ್, ಹೌರಾ, ಉಲುಬೇರಿಯಾ, ಜಾರ್ಗ್ರಾಮ್, ಜಾದವ್ಪುರ, ಮಥುರಾಪುರ್ ಮತ್ತು ಬರ್ಧಮಾನ್ ಪುರ್ಬಾ ಸೇರಿವೆ.
ಇನ್ನು ಜಾರ್ಖಂಡ್ನಲ್ಲಿ ಕೂಡ ಮೋದಿ ಮ್ಯಾಜಿಕ್ ನಡೆದಿಲ್ಲ. ಬದಲಾಗಿ 2019ರಲ್ಲಿ ಗೆದ್ದಿದ್ದ ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ರಾಜ್ಯದಲ್ಲಿ ಮೋದಿ ಪ್ರಚಾರ ನಡೆಸಿದ್ದ 7 ಕ್ಷೇತ್ರಗಳಲ್ಲಿ 3ರಲ್ಲಿ ಬಿಜೆಪಿಗೆ ಸೋಲಾಗಿದೆ.
ಇನ್ನು ಉತ್ತರ ಪ್ರದೇಶದಲ್ಲಿನ ಸೋಲಂತೂ ಮೋದಿಗೆ ದೊಡ್ಡ ಆಘಾತ. ರಾಮಮಂದಿರದ ತರಾತುರಿಯ ಉದ್ಘಾಟನೆ ಮೋದಿ ಚುನಾವಣಾ ಪ್ರಚಾರದ ಭಾಗವೇ ಆಗಿತ್ತು ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಅಯೋಧ್ಯೆಯಿರುವ ಲೋಕಸಭಾ ಕ್ಷೇತ್ರದಲ್ಲಿಯೇ ಬಿಜೆಪಿಗೆ ಸೋಲಾಗಿರುವುದು ಧರ್ಮದ ಹೆಸರಲ್ಲಿ ಮೋದಿ ಉರುಳಿಸಿದ ದಾಳ ಫಲ ಕೊಟ್ಟಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನ.
ಅಯೋಧ್ಯೆ ಮಾತ್ರವಲ್ಲ ಅದರ ಸುತ್ತಮುತ್ತಲ ಕ್ಷೇತ್ರಗಳಾದ ಸುಲ್ತಾನ್ ಪುರ, ಅಂಬೇಡ್ಕರ್ ನಗರ್, ಬಾರಾಬಂಕಿ ಹಾಗು ಅಮೇಠಿಗಳಲ್ಲೂ ಬಿಜೆಪಿ ಸೋತಿದೆ. ಕಳೆದ ಬಾರಿ 62 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 33ಕ್ಕೆ ಕುಸಿದಿರುವುದು ಅದರ ಹೀನಾಯ ಸೋಲು.
ಕರ್ನಾಟಕದಲ್ಲೂ ಬಿಜೆಪಿ ನಷ್ಟ ಕಾಣಬೇಕಾಯಿತು. ಮುಸ್ಲಿಂ ಮೀಸಲಾತಿಗಾಗಿ ದಲಿತರು ಹಿಂದುಳಿದವರ ಮೀಸಲಾತಿಯನ್ನು ಕಾಂಗ್ರೆಸ್ ಕಿತ್ತುಕೊಂಡಿದೆ ಎಂದು ಇಲ್ಲಿ ಮೋದಿ ಅಪಪ್ರಚಾರ ಮಾಡಿದ್ದರು.