ಮಹಾರಾಷ್ಟ್ರ| ಬೈಕ್ ಗೆ ಢಿಕ್ಕಿ ಹೊಡೆದ ಕಾರು; ತಾಯಿ-ಮಗಳು ಮೃತ್ಯು
► ವಾಹನ ಚಾಲನೆ ಕುರಿತು ವಾಗ್ವಾದದ ಬಳಿಕ ಐದು ಕಿ.ಮೀ.ವರೆಗೆ ಬೈಕ್ ಅನ್ನು ಬೆನ್ನಟ್ಟಿದ್ದ ಕಾರು ► ‘ಮುಸ್ಲಿಮರಿಗೆ ಪಾಠ ಕಲಿಸುವ ಅಗತ್ಯವಿದೆ’ ಎಂದು ಹೇಳಿ ಬೆನ್ನಟ್ಟಿದ್ದ ಆರೋಪಿಗಳು
Photo : Google Maps
ಲಾತೂರು,: ಮಹಾರಾಷ್ಟ್ರದ ಲಾತೂರಿನಲ್ಲಿ ಕಾರೊಂದು ಹಿಂದಿನಿಂದ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಬಾಲಕಿ ಮತ್ತು ಆಕೆಯ ತಾಯಿ ಮೃತಪಟ್ಟಿದ್ದಾರೆ. ವಾಹನ ಚಾಲನೆ ಕುರಿತು ವಾಗ್ವಾದದ ಬಳಿಕ ಕಾರಿನಲ್ಲಿದ್ದ ಐವರು ಐದು ಕಿ.ಮೀ.ವರೆಗೆ ಬೈಕ್ ಅನ್ನು ಬೆನ್ನಟ್ಟಿದ್ದರು. ಬೈಕ್ ಚಲಾಯಿಸುತ್ತಿದ್ದ ಸಾದಿಕ್ ಶೇಖ್ ಮತ್ತು ಅವರ ಆರು ವರ್ಷದ ಪುತ್ರ ಗಾಯಗೊಂಡಿದ್ದರೆ, ಅವರ ಪತ್ನಿ ಇಕ್ರಾ ಮತ್ತು ಪುತ್ರಿ ನಾದಿಯಾ ಮೃತಪಟ್ಟಿದ್ದಾರೆ.
ತಮ್ಮನ್ನು ಬೆನ್ನಟ್ಟಿದ್ದ ವ್ಯಕ್ತಿಗಳು ಕೋಮು ನಿಂದನೆಯನ್ನು ಮಾಡಿದ್ದರು ಮತ್ತು ‘ಮುಸ್ಲಿಮರಿಗೆ ಪಾಠ ಕಲಿಸುವ ಅಗತ್ಯವಿದೆ’ ಎಂದು ಹೇಳಿದ್ದರೆಂದು ಸಾದಿಕ್ ಆರೋಪಿಸಿದ್ದಾರೆ.
ಕೊಲೆ ಆರೋಪದ ಮೇಲೆ ದಿಗಂಬರ ಪಂಡೋಲೆ,ಕೃಷ್ಣ ವಾಘ್, ಬಸವರಾಜ ಧೋತ್ರೆ,ಮನೋಜ ಮಾನೆ ಮತ್ತು ಮನೋಜ ಮುಡಾಮೆ ಎನ್ನುವವರನ್ನು ಬಂಧಿಸಲಾಗಿದೆ.
ಘಟನೆಯನ್ನು ದ್ವೇಷಾಪರಾಧವಾಗಿ ತನಿಖೆ ನಡೆಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಲಾತೂರು ಎಸ್ಪಿ ಸೋಮಯ್ ಮುಂಧೆ ಅವರು,ಸದ್ಯಕ್ಕೆ ಇದು ರಸ್ತೆ ಜಗಳದ ಪ್ರಕರಣದಂತೆ ಕಂಡು ಬರುತ್ತಿದೆ ಎಂದು ಉತ್ತರಿಸಿದರು.
ಸೆ.29ರಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಲಾತೂರಿನಿಂದ 20 ಕಿ.ಮೀ.ದೂರದ ಔಸಾ ಬಳಿ ಸಾದಿಕ್ ಚಲಾಯಿಸುತ್ತಿದ್ದ ಬೈಕ್ನ್ನು ಹಿಂದಿಕ್ಕಿದ ಕಾರು ಏಕಾಏಕಿ ಅದರ ಮುಂದೆ ಚಲಿಸಿತ್ತು. ಇದನ್ನು ಸಾದಿಕ್ ಪ್ರಶ್ನಿಸಿದ್ದರು. ಸಾದಿಕ್ ಹೇಳಿರುವಂತೆ ಕಾರಿನಲ್ಲಿದ್ದವರು ಪಾನಮತ್ತರಾಗಿದ್ದರು. ಮಾತಿನ ಚಕಮಕಿಯ ನಂತರ ಸಾದಿಕ್ ಮುಂದಕ್ಕೆ ತೆರಳಿದ್ದು,ಬೈಕ್ನ್ನು ಬೆನ್ನಟ್ಟಿದ್ದ ಕಾರು ಬುಧಡಾ ಗ್ರಾಮದ ಬಳಿ ಅದಕ್ಕೆ ಢಿಕ್ಕಿ ಹೊಡೆದಿತ್ತು.
ಪ್ರಾರಂಭದಲ್ಲಿ ಇದೊಂದು ರಸ್ತೆ ಅಪಘಾತ ಎಂದು ಸಾದಿಕ್ ಭಾವಿಸಿದ್ದರು. ಮರುದಿನ ಪ್ರಜ್ಞೆ ಮರುಕಳಿಸಿದ ಬಳಿಕ ತಮ್ಮ ಧರ್ಮದ ಆಧಾರದಲ್ಲಿ ತಮ್ಮನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಆರೋಪಿಸಿದ್ದಾರೆ.
ಇಕ್ರಾ ಬುರ್ಕಾ ಧರಿಸಿದ್ದರಿಂದ ಆರೋಪಿಗಳು ಕೋಮು ನಿಂದನೆಯನ್ನು ಮಾಡಿದ್ದರು ಎಂದು ಕುಟುಂಬದ ವಕೀಲ ಅಲ್ತಾಫ್ ಕಾಝಿ ಆರೋಪಿಸಿದರು. ಆದರೆ ಪೋಲಿಸರು ದಾಖಲಿಸಿರುವ ಎಫ್ಐಆರ್ನಲ್ಲಿ ಕೋಮು ನಿಂದನೆಯನ್ನು ಉಲ್ಲೇಖಿಸಿಲ್ಲ.
ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ಐವರು ಆರೋಪಿಗಳನ್ನು ಹಿಡಿದು ಪೋಲಿಸರಿಗೊಪ್ಪಿಸಿದ್ದರು. ಆರೋಪಿಗಳ ಪೈಕಿ ಓರ್ವ ತಾವು ಉದ್ದೇಶಪೂರ್ವಕವಾಗಿ ಕಾರನ್ನು ಬೈಕಿಗೆ ಢಿಕ್ಕಿ ಹೊಡೆಸಿದ್ದೆವು ಎಂದು ಒಪ್ಪಿಕೊಂಡಿದ್ದನ್ನು ವೀಡಿಯೊವೊಂದು ತೋರಿಸಿದೆ.
ಪೋಲಿಸರು ಆರಂಭದಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲು ನಿರಾಕರಿಸಿದ್ದರು ಮತ್ತು ಸಾಮಾನ್ಯ ಅಪಘಾತವನ್ನಾಗಿ ದಾಖಲಿಸಿಕೊಳ್ಳಲು ಮುಂದಾಗಿದ್ದರು. ಖಾಝಿ ಮತ್ತು ಮುಸ್ಲಿಮ್ ಸಮುದಾಯದ ಸಾಮಾಜಿಕ ಕಾರ್ಯಕರ್ತರ ಒತ್ತಡದಿಂದಾಗಿ ಎರಡು ದಿನಗಳ ಬಳಿಕ ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.