ಮಹಾರಾಷ್ಟ್ರ | ನಟಿಯ ಕಾರು ಢಿಕ್ಕಿ ಕಾರ್ಮಿಕ ಸಾವು, ಇನ್ನೋರ್ವ ಗಂಭೀರ
ನಟಿ ಊರ್ಮಿಳಾ ಕೊಠಾರೆ | PC : X
ಮುಂಬೈ : ಮುಂಬೈಯ ಕಾಂಡಿವಿಲಿಯಲ್ಲಿ ಮರಾಠಿಯ ಜನಪ್ರಿಯ ನಟಿ ಊರ್ಮಿಳಾ ಕೊಠಾರೆ ಅವರಿಗೆ ಸೇರಿದ ಕಾರು ಡಿಕ್ಕಿಯಾಗಿ ಮೆಟ್ರೋ ರೈಲ್ವೇ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.
ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ.
ಚಿತ್ರೀಕರಣ ನಡೆಯುತ್ತಿದ್ದ ಸ್ಥಳದಿಂದ ಹಿಂದಿರುಗುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದ್ದು, ನಟಿ ಊರ್ಮಿಳಾ ಕೊಠಾರೆ ಹಾಗೂ ಅವರ ಕಾರು ಚಾಲಕನಿಗೆ ಕೂಡ ಗಾಯಗಳಾಗಿವೆ.
ನಟಿ ಊರ್ಮಿಳ ಕೊಠಾರೆ ಅವರು ಶನಿವಾರ ಮುಂಜಾನೆ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಹುಂಡೈ ವೆರ್ನಾ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪೊಯಿಸರ್ ಮೆಟ್ರೋ ನಿಲ್ದಾಣದ ಸಮೀಪ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ. ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.
ಕಾರು ತೀವ್ರವಾಗಿ ಜಖಂಗೊಂಡಿದೆ. ಸರಿಯಾದ ಸಮಯಕ್ಕೆ ಏರ್ ಬ್ಯಾಗ್ ತೆರೆದುಕೊಂಡಿರುವುದರಿಂದ ಊರ್ಮಿಳಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಮತಾ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ಹೇಳಿವೆ.