ಮಹಾತ್ಮ ಗಾಂಧಿ ಅವರು ಪಾಕಿಸ್ತಾನದ ರಾಷ್ಟ್ರಪಿತ, ಭಾರತದ್ದಲ್ಲ: ಗಾಯಕ ಅಭಿಜೀತ್ ಭಟ್ಟಾಚಾರ್ಯ ವಿವಾದಾತ್ಮಕ ಹೇಳಿಕೆ
ಅಭಿಜೀತ್ ಭಟ್ಟಾಚಾರ್ಯ (PTI)
ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು 'ಪಾಕಿಸ್ತಾನದ ಪಿತಾಮಹ' ಎಂದು ಹೇಳುವ ಮೂಲಕ ಹಿನ್ನಲೆ ಗಾಯಕ ಅಭಿಜೀತ್ ಭಟ್ಟಾಚಾರ್ಯ ವಿವಾದವನ್ನು ಸೃಷ್ಟಿಸಿದ್ದಾರೆ.
ಪತ್ರಕರ್ತ ಶುಭಂಕರ್ ಮಿಶ್ರಾ ಅವರೊಂದಿಗಿನ ತಮ್ಮ ಪಾಡ್ಕಾಸ್ಟ್ ಸಂವಾದದಲ್ಲಿ ಮಾತನಾಡಿದ ಅಭಿಜೀತ್ ಭಟ್ಟಾಚಾರ್ಯ, ʼಪಂಚಮ್ ದಾʼ(ಸಂಗೀತ ಸಂಯೋಜಕ ಆರ್ ಡಿ ಬರ್ಮನ್) ಮಹಾತ್ಮಾ ಗಾಂಧಿಗಿಂತ ದೊಡ್ಡವರು, ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತರಾಗಿದ್ದಂತೆ, ಸಂಗೀತ ಲೋಕದಲ್ಲಿ ʼಪಂಚಮ್ ದಾʼ ಅವರು ರಾಷ್ಟ್ರಪಿತರಾಗಿದ್ದಾರೆ ಎಂದು ಹೇಳಿದ್ದಾರೆ.
"ಪಂಚಮ್ ದಾ (ಆರ್ ಡಿ ಬರ್ಮನ್) ಮಹಾತ್ಮಾ ಗಾಂಧಿಯವರಿಗಿಂತ ದೊಡ್ಡವರು, ಅವರು ಸಂಗೀತದ ರಾಷ್ಟ್ರಪಿತ. ಮಹಾತ್ಮ ಗಾಂಧಿ ಅವರು ಪಾಕಿಸ್ತಾನದ ರಾಷ್ಟ್ರಪಿತ, ಭಾರತದ್ದಲ್ಲ. ಭಾರತ ಯಾವಾಗಲೂ ಇತ್ತು. ಪಾಕಿಸ್ತಾನವನ್ನು ರಚಿಸಲಾಗಿದೆ. ಮಹಾತ್ಮ ಗಾಂಧಿ ನಮ್ಮ ರಾಷ್ಟ್ರದ ಪಿತಾಮಹ ಎಂದು ತಪ್ಪಾಗಿ ಕರೆಯಲಾಗಿದೆʼ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಅಭಿಜೀತ್ ಭಟ್ಟಾಚಾರ್ಯ ಪ್ರಸಿದ್ಧ ಸಂಗೀತ ಸಂಯೋಜಕ ಆರ್ ಡಿ ಬರ್ಮನ್ ಅವರ ಮೂಲಕ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. 1,000ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಅಭಿಜೀತ್ ಭಟ್ಟಾಚಾರ್ಯ ಇದೀಗ ತಮ್ಮ ಹೇಳಿಕೆ ಮೂಲಕ ವಿವಾದಕ್ಕೀಡಾಗಿದ್ದಾರೆ.