ಮಹುವಾ ಮೊಯಿತ್ರಾ ಭ್ರಷ್ಟಾಚಾರ ಪ್ರಕರಣ ; ವಿಚಾರಣೆಗೆ ಹಾಜರಾಗಲು ವಕೀಲ ದೆಹಾದ್ರಾಯ್ ಗೆ ಸಿಬಿಐ ಸೂಚನೆ
ಮಹುವಾ ಮೊಯಿತ್ರಾ| Photo: PTI
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸಿನ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಲೋಕಪಾಲ್ ಶಿಫಾರಸು ಮಾಡಿದ ಭ್ರಷ್ಟಾಚಾರ ದೂರಿನ ತನಿಖೆಗೆ ಸಂಬಂಧಿಸಿ ಗುರುವಾರ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯವಾದಿ ಜೈ ಅನಂತ್ ದೆಹಾದ್ರಾಯ್ ಅವರಿಗೆ ಸಿಬಿಐ ಸೂಚಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಮೊಯಿತ್ರಾ ಅವರ ಆಪ್ತರಾಗಿದ್ದ ದೆಹಾದ್ರಾಯ್ ಅವರು ಮೊಯಿತ್ರಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆದರೆ, ಮೊಯಿತ್ರಾ ಅವರು ಈ ಆರೋಪಗಳನ್ನು ನಿರಾಕರಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಸಿಬಿಐ ಕಚೇರಿಯ ಎಸಿ-3 ಘಟಕದಲ್ಲಿ ಗುರುವಾರ ಅಪರಾಹ್ನ 2 ಗಂಟೆಗೆ ಹಾಜರಾಗುವಂತೆ ದೆಹಾದ್ರಾಯ್ ಅವರಿಗೆ ಸಿಬಿಐ ಸೂಚಿಸಿದೆ.
ಭ್ರಷ್ಟಾಚಾರ ತಡೆ ಒಂಬುಡ್ಸ್ಮನ್ ಲೋಕಪಾಲ್ ನ ಶಿಫಾರಸಿನಂತೆ ಮಹುವಾ ಮೊಯಿತ್ರಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ಕುರಿತು ಸಿಬಿಐ ತನಿಖೆ ಆರಂಭಿಸಿದೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಯಿತ್ರಾ ಅವರು ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಪಾಲ್ ಗೆ ದೂರು ಸಲ್ಲಿಸಿದ್ದರು.