ಮಹುವಾ ಮೊಯಿತ್ರಾ ರಾಜಕಾರಣದ ಸಂತ್ರಸ್ತೆ: ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ
ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ (Photo- PTI)
ಕೋಲ್ಕತ್ತಾ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಗಣ್ಯ ಉದ್ಯಮಿಯೊಬ್ಬರಿಂದ ನಗದು ಪಡೆಯಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾರ ನೆರವಿಗೆ ಧಾವಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಮಹುವಾ ಮೊಯಿತ್ರಾ ರಾಜಕೀಯ ಸಂತ್ರಸ್ತೆಯಾಗಿದ್ದಾರೆ ಎಂದು ಸಮರ್ಥಿಸಿದ್ದಾರೆ. ಆಕೆ ತಮ್ಮ ವೈಯಕ್ತಿಕ ಬಿಕ್ಕಟ್ಟುಗಳ ವಿರುದ್ಧ ತಾವೇ ಹೋರಾಡಲು ಸಮರ್ಥರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ತೃಣಮೂಲ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ಅಭಿಷೇಕ್ ಬ್ಯಾನರ್ಜಿ, “ಕೇಂದ್ರ ಸರ್ಕಾರದ ಈ ನಡೆ ಹಾಗೂ ನೈತಿಕ ಸಮಿತಿಯ ವರದಿಯ ಪ್ರಕಾರ, ಆಕೆಯ ವಿರುದ್ಧ ತನಿಖೆ ನಡೆಯಬೇಕಿದೆ ಎಂದು ಹೇಳಲಾಗಿದೆ. ಮಹುವಾ ವಿರುದ್ಧ ನಿಮ್ಮ ಬಳಿ ಏನೂ ಇಲ್ಲದಿರುವಾಗ ಮತ್ತು ಈ ವಿಷಯವು ತನಿಖೆಗೆ ಸಂಬಂಧಿಸಿರುವಾಗ, ಆಕೆಯನ್ನು ಸದನದಿಂದ ಉಚ್ಚಾಟಿಸುವಂತೇಕೆ ಶಿಫಾರಸು ಮಾಡಲಾಗಿದೆ? ಮಹುವಾ ತಮ್ಮ ವೈಯಕ್ತಿಕ ಬಿಕ್ಕಟ್ಟುಗಳ ವಿರುದ್ಧ ತಾವೇ ಹೋರಾಡಲು ಸಮರ್ಥರಾಗಿದ್ದಾರೆ ಎಂಬುದು ನನ್ನ ಭಾವನೆ. ಅವರು ನನ್ನನ್ನು ಕಳೆದ ನಾಲ್ಕು ವರ್ಷಗಳಿಂದ ಸಂತ್ರಸ್ತನನ್ನಾಗಿಸುತ್ತಿದ್ದು, ಅದು ಅವರ ಪ್ರಮಾಣಿತ ಅಭ್ಯಾಸ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳ ಕುರಿತು ಪ್ರತಿಕ್ರಿಯಿಸುವಾಗ ಎಚ್ಚರಿಕೆಯಿಂದಿರಬೇಕು ಎಂದು ತೃಣಮೂಲ ಕಾಂಗ್ರೆಸ್ ಪಕ್ಷವು ತನ್ನ ಪಕ್ಷದ ನಾಯಕರಿಗೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಈ ಪ್ರತಿಕ್ರಿಯೆಯು ಮಹತ್ವ ಪಡೆದುಕೊಂಡಿದೆ.