ಮಹಾರಾಷ್ಟ್ರದಲ್ಲಿ ಬಹುಮತದತ್ತ ಮಹಾಯುತಿ: ಫಡ್ನವೀಸ್ ರನ್ನು ಸಿಎಂ ಮಾಡುವಂತೆ ಬಿಜೆಪಿ ನಾಯಕ ದರೇಕರ್ ಆಗ್ರಹ
ದೇವೇಂದ್ರ ಫಡ್ನವಿಸ್ ,
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತ ಎಣಿಕೆಯ ಆರಂಭಿಕ ಟ್ರೆಂಡ್ ಗಳು ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ಸೂಚಿಸುತ್ತಿರುವಂತೆಯೆ, ದೇವೇಂದ್ರ ಫಡ್ನವಿಸ್ ರನ್ನು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕು ಎಂದು ಶನಿವಾರ ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರವೀಣ್ ದರೇಕರ್ ಆಗ್ರಹಿಸಿದ್ದಾರೆ.
ಮೈತ್ರಿಕೂಟದಲ್ಲಿ ಯಾವ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸುತ್ತದೆಯೊ, ಆ ಪಕ್ಷದವರು ಮುಖ್ಯಮಂತ್ರಿಯಾಗಲು ಅರ್ಹರಾಗಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಾಲಿ ಟ್ರೆಂಡ್ ಆಧರಿಸಿ ಹೇಳುವುದಾದರೆ, ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಬೇಕು. ಈ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸಲಾಗಿದ್ದು, ಈ ಚುನಾವಣೆಯನ್ನು ಅವರು ಧರ್ಮಯುದ್ಧಕ್ಕೆ ಹೋಲಿಸಿದ್ದರು” ಎಂದು ಹೇಳಿದ್ದಾರೆ.
ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಕುರಿತು ಕೇಳಲಾದ ಪ್ರಶ್ನೆಗೆ, “ಶಿವಸೇನೆ ಮೈತ್ರಿಕೂಟದ ಭಾಗವಾಗಿದ್ದು, ಅದರಂತೆ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆಯುತ್ತದೊ, ಆ ಪಕ್ಷದವರು ಮುಖ್ಯಮಂತ್ರಿ ಹುದ್ದೆಗೆ ಅರ್ಹರಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗ ಪ್ರಕಟಿಸಿರುವ ಇತ್ತೀಚಿನ ಮತ ಎಣಿಕೆ ಅಂಕಿ-ಸಂಖ್ಯೆಯ ಪ್ರಕಾರ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ತೋರಿಸುತ್ತಿದ್ದು, 288 ವಿಧಾನಸಭಾ ಕ್ಷೇತ್ರಗಳ ಪೈಕಿ ಮಹಾಯುತಿ ಮೈತ್ರಿಕೂಟವು 218 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷಗಳ ಮಹಾವಿಕಾಸ್ ಆಘಾಡಿ ಮೈತ್ರಿಕೂಟ ಭಾರಿ ಹಿನ್ನಡೆಗೆ ತುತ್ತಾಗಿದ್ದು, 50 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.