ಕೇಂದ್ರ ಸಾಹಿತ್ಯ ಅಕಾಡೆಮಿಗೆ ರಾಜೀನಾಮೆ ನೀಡಿದ ಮಲಯಾಳಂ ಲೇಖಕ ಸಿ ರಾಧಾಕೃಷ್ಣನ್
ಸಿ ರಾಧಾಕೃಷ್ಣನ್ | Photo : alchetron.com
ಹೊಸದಿಲ್ಲಿ : ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವವನ್ನು ಕೇಂದ್ರ ಸಚಿವರೊಬ್ಬರು ಉದ್ಘಾಟಿಸಿರುವುದನ್ನು ವಿರೋಧಿಸಿ ಖ್ಯಾತ ಮಲಯಾಳಂ ಲೇಖಕ ಸಿ ರಾಧಾಕೃಷ್ಣನ್ ಅವರು ಸೋಮವಾರ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಜಕೀಯ ಪ್ರಭಾವಕ್ಕೆ ಮಣಿಯದೆ ಸಂಸ್ಥೆಯ ಸ್ವಾಯತ್ತತೆಯನ್ನು ನಿರಂತರವಾಗಿ ಎತ್ತಿ ಹಿಡಿದಿರುವ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದು ಅಕಾಡೆಮಿ ಕಾರ್ಯದರ್ಶಿಗೆ ಬರೆದ ರಾಜೀನಾಮೆ ಪತ್ರದಲ್ಲಿ ರಾಧಾಕೃಷ್ಣನ್ ಉಲ್ಲೇಖಿಸಿದ್ದಾರೆ.
"ಮುಂಪೆ ಪರಾಕ್ಕುನ್ನ ಪಕ್ಷಿಗಳು", "ಸ್ಪಂದಮಾಪಿನಿಕಲೆ ನಂದಿ" ಮತ್ತು "ತೀಕ್ಕಡಲ್ ಕಡಂಜು ತಿರುಮಧುರಂ" ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕಾದಂಬರಿಗಳಿಗೆ ಹೆಸರುವಾಸಿಯಾದ ಅವರು, ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರದ ಸಚಿವರು ಭಾಗವಹಿಸಿದಾಗ ಅಕಾಡೆಮಿಯ ಎಲ್ಲಾ ಸದಸ್ಯರು ಪ್ರತಿಭಟನೆ ನಡೆಸಿದರು. ಬಳಿಕ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಲಾಯಿತು ಎಂದರು.
ರಾಧಾಕೃಷ್ಣನ್, ತಾನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ವಿರುದ್ಧ ಪ್ರತಿಭಟಿಸುತ್ತಿಲ್ಲ. ಅಕಾಡೆಮಿಯ ಸ್ವತಂತ್ರ ಘನತೆಯನ್ನು ಕುಗ್ಗಿಸುವ ಸಂಸ್ಕೃತಿಯ ಆಡಳಿತದ ರಾಜಕೀಯದ ವಿರುದ್ಧ ತಮ್ಮ ಪ್ರತಿಭಟನೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಅಕಾಡೆಮಿಯ ದಿನನಿತ್ಯದ ಕಾರ್ಯಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪದ ಘಟನೆಗಳು ಹೆಚ್ಚುತ್ತಿರುವ ಕಾರಣದಿಂದ ತಾನು ಅಕಾಡೆಮಿಯನ್ನು ತೊರೆದಿದ್ದೇನೆ ಎಂದು ಲೇಖಕರು ಪಿಟಿಐಗೆ ದೃಢಪಡಿಸಿದರು.
ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 170 ಕ್ಕೂ ಹೆಚ್ಚು ಭಾಷೆಗಳ ಸಾವಿರಕ್ಕೂ ಹೆಚ್ಚು ಲೇಖಕರ ಭಾಗವಹಿಸುವಿಕೆಗೆ ಸಾಕ್ಷಿಯಾದ ‘ಸಾಹಿತ್ಯೋತ್ಸವ ಅಕ್ಷರಗಳ ಹಬ್ಬ’ದ 39 ನೇ ಆವೃತ್ತಿಯನ್ನು ಉದ್ಘಾಟಿಸಿದ ಕೆಲವು ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಇನ್ನೆರಡು ಅಕಾಡೆಮಿಗಳು ಈಗಾಗಲೇ ಸ್ವಾಯತ್ತತೆಯನ್ನು ಕಳೆದುಕೊಂಡಿವೆ ಮತ್ತು ಸಾಹಿತ್ಯ ಅಕಾಡೆಮಿಯ ಕಾರ್ಯಚಟುವಟಿಕೆಯಲ್ಲಿ ರಾಜಕೀಯ ಹಸ್ತಕ್ಷೇಪದ ಇತ್ತೀಚಿನ ಪ್ರವೃತ್ತಿಯ ಬಗ್ಗೆ ಬರಹಗಾರರ ಧ್ವನಿಯನ್ನು ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಗಳು ಆಲಿಸುತ್ತಾರೆ ಎಂಬ ಆಶಯದೊಂದಿಗೆ ರಾಜೀನಾಮೆ ನೀಡಿದ್ದೇನೆ ಎಂದು ರಾಧಾಕೃಷ್ಣನ್ ಹೇಳಿದರು.
ಪತ್ರದಲ್ಲಿ ರಾಧಾಕೃಷ್ಣನ್, “ಅಕಾಡಮಿಯ ಸಂವಿಧಾನವನ್ನು ಪುನರ್ ರಚಿಸುವಲ್ಲಿಯೂ ರಾಜಕೀಯ ಮೇಲಾಧಿಕಾರಿಗಳು ಜಾಣತನ ತೋರುತ್ತಿದ್ದಾರೆಂದು ವರದಿಯಾಗಿದೆ! ಕ್ಷಮಿಸಿ, ರಾಷ್ಟ್ರದ ಕೊನೆಯ ಪ್ರಜಾಸತ್ತಾತ್ಮಕ ಸ್ವಾಯತ್ತ ಸಂಸ್ಕೃತಿಯ ಅಂತ್ಯಕ್ರಿಯೆಗೆ ನಾನು ಮೂಕ ಸಾಕ್ಷಿಯಾಗಲು ಸಾಧ್ಯವಿಲ್ಲ”, ಎಂದು ತಿಳಿಸಿದ್ದಾರೆ.
ಡಿಸೆಂಬರ್ 2022 ರಲ್ಲಿ ರಾಧಾಕೃಷ್ಣನ್ ಅವರಿಗೆ ಅಕಾಡೆಮಿಯು ಸದಸ್ಯತ್ವ ನೀಡಿ ಗೌರವಿಸಲಾಗಿತ್ತು.