ಮಲಯಾಳಿ ಆಕ್ಸ್ ಫರ್ಡ್ ವಿಜ್ಞಾನಿ ಡಾ. ಸಫೀರ್ ಗೆ ಪ್ರತಿಷ್ಠಿತ ರಾಯಲ್ ಸೊಸೈಟಿ ಫೆಲೋಶಿಪ್
ಡಾ.ಸಫೀರ್ ಸಿ.ಕೆ. (Photo credit: timelinedaily.com)
ಹೊಸದಿಲ್ಲಿ: ಮಲಯಾಳಿ ಆಕ್ಸ್ ಫರ್ಡ್ ವಿಜ್ಞಾನಿ, ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಅಧ್ಯಾಪಕ ಡಾ.ಸಫೀರ್ ಸಿ.ಕೆ. ಪ್ರತಿಷ್ಠಿತ ರಾಯಲ್ ಸೊಸೈಟಿ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ.
ಸ್ಪಿಂಟ್ರೋನಿಕ್ಸ್ (spintronics) ಕ್ಷೇತ್ರದಲ್ಲಿ ಪ್ರಮುಖ ಯುವ ಸಂಶೋಧಕರಾಗಿರುವ ಡಾ. ಸಫೀರ್ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದ್ದು, 2024ರ ಸಾಲಿನ ಪ್ರತಿಷ್ಠಿತ ರಾಯಲ್ ಸೊಸೈಟಿ ಯೂನಿವರ್ಸಿಟಿ ರಿಸರ್ಚ್ ಫೆಲೋಶಿಪ್ ಅನ್ನು ಡಾ. ಸಫೀರ್ ಸಿ.ಕೆ. ಪಡೆದುಕೊಂಡಿದ್ದಾರೆ. ಈ ಮೂಲಕ 1.85 ಮಿಲಿಯನ್ ಪೌಂಡ್ ಅಂದರೆ 19,73,48,195ರೂ. ಮೌಲ್ಯದ ವೈಯಕ್ತಿಕ ನಿಧಿಯನ್ನು ಅವರು ಪಡೆದುಕೊಂಡಿದ್ದಾರೆ.
ಕೇರಳದ ಮಲಪ್ಪುರಂನ ಸಣ್ಣ ಹಳ್ಳಿಯಿಂದ ಡಾ. ಸಫೀರ್ ಸಿ.ಕೆ. ಅವರ ಆಕ್ಸ್ಫರ್ಡ್ ವರೆಗಿನ ಪ್ರಯಾಣ ಮತ್ತು ರಾಯಲ್ ಸೊಸೈಟಿ ಯೂನಿವರ್ಸಿಟಿ ರಿಸರ್ಚ್ ಫೆಲೋಶಿಪ್ ಗಳಿಸಿರುವುದು ಮಾದರಿಯಾಗಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ವಿಶ್ವದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ವಿಶ್ವದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವಾಗಿರುವ ಆಕ್ಸ್ಫರ್ಡ್ ವಿವಿ ಎಲ್ಲಾ ಶಿಕ್ಷಣ ಪ್ರೇಮಿಗಳ ಕನಸಿನ ತಾಣವಾಗಿದೆ.
ರಾಯಲ್ ಸೊಸೈಟಿಯು ಅತ್ಯಂತ ಹಳೆಯ ಮತ್ತು ಬ್ರಿಟನ್ ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಾಗಿದೆ. ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆಯುವುದು ವಿಶ್ವದ ವಿಜ್ಞಾನ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಐಸಾಕ್ ನ್ಯೂಟನ್ ಮತ್ತು ಆಲ್ಬರ್ಟ್ ಐನ್ ಸ್ಟೈನ್ ನಂತಹ ವಿಶ್ವ ಪ್ರಸಿದ್ಧ ವಿಜ್ಞಾನಿಗಳು ಮತ್ತು ರಾಮಾನುಜನ್ ಮತ್ತು ಸಿವಿ ರಾಮನ್ ಅವರಂತಹ ಪ್ರಸಿದ್ಧ ಭಾರತೀಯ ವಿಜ್ಞಾನಿಗಳು ರಾಯಲ್ ಸೊಸೈಟಿ ಫೆಲೋಶಿಪ್ ಪಡೆದುಕೊಂಡಿದ್ದರು. ಇದು ರಾಯಲ್ ಸೊಸೈಟಿಯು ವಿಶ್ವದಲ್ಲಿ ಎಷ್ಟು ಪ್ರತಿಷ್ಠಿತ ಸಂಸ್ಥೆ ಎಂಬುವುದಕ್ಕೆ ನಿದರ್ಶನವಾಗಿದೆ.
ಡಾ. ಸಫೀರ್ ಸಿ.ಕೆ. ತನ್ನ ಶೈಕ್ಷಣಿಕ ಪ್ರಯಾಣವನ್ನು ಕೇರಳದ ಮೊಂಗಮ್ ಎಂಬ ಸಣ್ಣ ಹಳ್ಳಿಯಿಂದ ಪ್ರಾರಂಭಿಸಿದ್ದರು. ಅವರು ಮೊಂಗಮ್ ಉಮ್ಮುಲ್ ಕುರಾ ಹೈಯರ್ ಸೆಕೆಂಡರಿ ಶಾಲೆ ಮತ್ತು ಮೊರೆಯೂರು ವಿಎಚ್ಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದರು. ದಿಲ್ಲಿ ವಿಶ್ವವಿದ್ಯಾನಿಲಯದ ಹಂಸರಾಜ್ ಕಾಲೇಜಿನಿಂದ ಭೌತಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದ ಬಳಿಕ ಫ್ರಾನ್ಸ್ ನ ಜೋಸೆಫ್ ಫೋರಿಯರ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಭಾರತ ಮತ್ತು ಫ್ರಾನ್ಸ್ ಸರ್ಕಾರದಿಂದ ಈ ವೇಳೆ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದರು. ಭಾರತದಿಂದ ಸ್ಕಾಲರ್ಶಿಪ್ ಪಡೆದ 12 ವಿದ್ಯಾರ್ಥಿಗಳಲ್ಲಿ ಸಫೀರ್ ಓರ್ವರಾಗಿದ್ದರು.
ಡಾ. ಸಫೀರ್ ಫ್ರೆಂಚ್ ಪರಮಾಣು ಕೇಂದ್ರದ ಭಾಗವಾಗಿರುವ ಸ್ಪಿಂಟೆಕ್ ಪ್ರಯೋಗಾಲಯದಿಂದ ನ್ಯಾನೊಫಿಸಿಕ್ಸ್ನಲ್ಲಿ ಡಾಕ್ಟರೇಟ್ ಪಡೆದಿದ್ದು, ಯುರೋಪ್ ನ ಅತ್ಯಂತ ಪ್ರತಿಷ್ಠಿತ ಮತ್ತು ಸ್ಪರ್ಧಾತ್ಮಕ ಸಂಶೋಧನಾ ಪ್ರಶಸ್ತಿಗಳಲ್ಲಿ ಒಂದಾದ ಮೇರಿ ಕ್ಯೂರಿ ಇಂಡಿವಿಜುವಲ್ ಫೆಲೋಶಿಪ್ (Marie Curie Individual Fellowship) ಕೂಡ ಪಡೆದುಕೊಂಡಿದ್ದಾರೆ.
ವೃತ್ತಿಜೀವನದಲ್ಲಿ ಸಫೀರ್ ಇದುವರೆಗೆ 18 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ, ಪ್ರಪಂಚದ ಕೆಲವು ಮಹತ್ವದ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡುವ ನ್ಯಾಚುರಲ್ ಜರ್ನಲ್ ಗಳಲ್ಲಿ ಕೂಡ ಅವರ ಲೇಖನ ಪ್ರಕಟವಾಗಿದೆ. ಅಮೆರಿಕನ್ ಫಿಸಿಕಲ್ ಸೊಸೈಟಿಯಿಂದ ನೀಡುವ ಅತ್ಯುತ್ತಮ ಪಿಎಚ್ಡಿಗಾಗಿ ನೀಡುವ ಪ್ರಶಸ್ತಿಯಲ್ಲಿ ಸಫೀರ್ ಫೈನಲಿಸ್ಟ್ ಆಗಿದ್ದರು. ಸಫೀರ್ ಅವರು ಏಷ್ಯಾ, ಯುರೋಪ್ ಮತ್ತು ಅಮೆರಿಕದಾದ್ಯಂತ 25ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಷಣವನ್ನು ಮಾಡಿದ್ದರು.