ಅಲ್ಪಸಂಖ್ಯಾತರ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಭಾರತ ತನ್ನ ಪಾತ್ರ ನಿರ್ವಹಿಸಲಿದೆ ಎಂಬ ಭರವಸೆ ಇದೆ: ಮಲೇಷ್ಯಾ ಪ್ರಧಾನಿ
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ (Photo: X/@ICWA_NewDelhi)
ಹೊಸದಿಲ್ಲಿ: “ಅಲ್ಪಸಂಖ್ಯಾತರು ಅಥವಾ ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುವ ಕೆಲವು ಗಂಭೀರ ಸಮಸ್ಯೆಗಳ ಕುರಿತು ಭಾರತವು ಕಠಿಣ ನಿಲುವು ಹೊಂದುತ್ತದೆ” ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಭಾರತಕ್ಕೆ ಭೇಟಿ ನೀಡಿರುವ ಅವರು, “ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಹೊಸದಿಲ್ಲಿ (ಭಾರತ ಸರ್ಕಾರವು) ತನ್ನ ಸರಿಯಾದ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರಿಸುತ್ತದೆ” ಎಂದು ತಾವು ಭಾವಿಸುವುದಾಗಿ ಹೇಳಿದ್ದಾರೆ.
"ಅಲ್ಪಸಂಖ್ಯಾತರು ಅಥವಾ ಧಾರ್ಮಿಕ ಭಾವನೆಗಳ ಮೇಲೆ ಪರಿಣಾಮ ಬೀರುವ ಕೆಲವು ಗಂಭೀರ ಸಮಸ್ಯೆಗಳ ಬಗ್ಗೆ ನೀವು (ಭಾರತ) ಸಹ ಹೆಣಗಾಡಬೇಕಾಗಿದೆ ಎಂಬ ಅಂಶವನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಭಾರತವು ತನ್ನ ಸರಿಯಾದ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಸ್ತಾಪಿಸಿದ್ದೇನೆ” ಎಂದು ದೆಹಲಿಯ ಐಸಿಡಬ್ಲ್ಯುಎಯಲ್ಲಿ ನಡೆದ ಅಧಿವೇಶನದಲ್ಲಿ ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಮಲೇಷ್ಯಾದ ಮಾಜಿ ಪ್ರಧಾನಿ ಮಹತೀರ್ ಮೊಹಮ್ಮದ್ ಭಾರತವನ್ನು ಟೀಕಿಸಿದ ನಂತರ ಭಾರತ-ಮಲೇಷ್ಯಾ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿತ್ತು. ಇಂತಹ ಹಿನ್ನೆಲೆಯಲ್ಲಿ ಮಲೇಷ್ಯಾ ಪ್ರಧಾನಿಯ ಈ ಹೇಳಿಕೆ ಬಂದಿದೆ.