ಚೀನಾ ಕಡೆ ವಾಲುತ್ತಿರುವ ಮಾಲ್ಡೀವ್ಸ್: ಭಾರತ ಜತೆಗಿನ ಒಪ್ಪಂದ ರದ್ದು
Photo: TOI
ಹೊಸದಿಲ್ಲಿ: ಮಾಲ್ಡೀವ್ಸ್ ನಿಂದ ಭಾರತದ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಲ್ಡೀವ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಒಪ್ಪಂದದಿಂದ ಈ ಪುಟ್ಟ ದೇಶ ಹಿಂದೆ ಸರಿದಿದೆ.
ಜಲವಿಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಭಾರತೀಯ ನೌಕಾಪಡೆ ಮತ್ತು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುಂದುವರಿಸದಿರಲು ಅಧ್ಯಕ್ಷ ಮೊಹ್ಮದ್ ನಿರ್ಧರಿಸಿದ್ದಾರೆ. ಮಾಲ್ಡೀವ್ಸ್ ಗುರುವಾರ ತನ್ನ ನಿರ್ಧಾರವನ್ನು ಭಾರತಕ್ಕೆ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ಸಂದರ್ಭದಲ್ಲಿ ಅಂದರೆ 2019ರ ಜೂನ್ ನಲ್ಲಿ ಮಾಡಿಕೊಂಡಿದ್ದ ಒಪ್ಪಂದ ಮುಂದುವರಿಸಲು ಅಸಾಧ್ಯ ಎಂದು ಸ್ಪಷ್ಟಪಡಿಸಿದೆ.
ಈ ಒಪ್ಪಂದದ ಅನ್ವಯ ಭಾರತದ ನೌಕಾಪಡೆಗೆ ಮಾಲ್ಡೀವ್ಸ್ ನಲ್ಲಿ ವಿಸ್ತೃತವಾದ ಜಲವಿಜ್ಞಾನ ಸಮೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡಲಾಗಿತ್ತು. ಪಥದರ್ಶನ ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಭದ್ರತೆ ಹಾಗೂ ರಕ್ಷಣಾ ಸಹಕಾರ, ಪರಿಸರ ಸಂರಕ್ಷಣೆ, ಕರಾವಳಿ ವಲಯ ನಿರ್ವಹಣೆ ಹಾಗೂ ವೈಜ್ಞಾನಿಕ ಸಂಶೋಧನೆಗೆ ಸಹಕರಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಹಿಂದಿನ ಅಧ್ಯಕ್ಷ ಇಬ್ರಾಹಿಂ ಸಾಲಿಹ್ ಮಾಡಿಕೊಂಡಿದ್ದ ಈ ಒಪ್ಪಂದದ ಅನ್ವಯ ಇಂಥ ಮೂರು ಸಮೀಕ್ಷೆಗಳನ್ನು ಭಾರತ ನಡೆಸಿತ್ತು.
"ಭವಿಷ್ಯದಲ್ಲಿ ಜಲವಿಜ್ಞಾನ ಕಾರ್ಯಗಳನ್ನು ಮಾಲ್ಡೀವ್ಸ್ ವ್ಯವಸ್ಥಾಪನೆಯಲ್ಲೇ ಕೈಗೊಳ್ಳಲಾಗುವುದು. ಈ ಮಾಹಿತಿ ಮಾಲ್ಡೀವ್ಸ್ಗೆ ಮಾತ್ರವೇ ಲಭ್ಯವಿರುತ್ತದೆ" ಎಂದು ಅಧ್ಯಕ್ಷರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮಾಲ್ಡೀವ್ಸ್ ನ ಹಿಂದಿನ ಅಧ್ಯಕ್ಷರು ಮಾಡಿಕೊಂಡಿದ್ದ ರಹಸ್ಯ ಒಪ್ಪಂದಗಳು ಮಾಲ್ಡೀವ್ಸ್ ನ ಸ್ವಾತಂತ್ರ್ಯ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥದ್ದಾಗಿದ್ದು, ಈ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ವಿವರಿಸಿದ್ದಾರೆ.
ನೂತನ ಅಧ್ಯಕ್ಷರ ನಡೆಗಳು ಚೀನಾ ಪರ ನಿಲುವನ್ನು ಸ್ಪಷ್ಟಪಡಿಸಿವೆ. ಭಾರತದ ಜತೆಗೆ ಹಿಂದಿನ ಸರ್ಕಾರ ಮಾಡಿಕೊಂಡಿದ್ದ ಹಲವು ಒಪ್ಪಂದಗಳನ್ನು ಈಗಾಗಲೇ ಮಾಲ್ಡೀವ್ಸ್ ಪರಾಮರ್ಶೆ ನಡೆಸಿದೆ.