ಮಾಲೇಗಾಂವ್ ಸ್ಫೋಟ ಪ್ರಕರಣ |ಪ್ರಜ್ಞಾ ಠಾಕೂರ್ ಗೆ ವಾರೆಂಟ್
ಪ್ರಜ್ಞಾ ಠಾಕೂರ್ | PC : PTI
ಮುಂಬೈ : ವಿಚಾರಣೆಗೆ ಗೈರಾದ ಕಾರಣಕ್ಕೆ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಬಿಜೆಪಿ ನಾಯಕಿ ಪ್ರಜ್ಞಾ ಠಾಕೂರ್ ಗೆ ವಿಶೇಷ NIA ನ್ಯಾಯಾಲಯವು ಮಂಗಳವಾರ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿದೆ.
ಅಂತಿಮ ಹಂತದ ವಿಚಾರಣೆ ಪ್ರಗತಿಯಲ್ಲಿದ್ದು, ಆರೋಪಿಯ ಹಾಜರಿ ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟ ವಿಶೇಷ ನ್ಯಾಯಾಧೀಶ ಎ.ಕೆ.ಲಹೋಟಿ, ಪ್ರಜ್ಞಾ ಠಾಕೂರ್ ಗೆ ವಾರೆಂಟ್ ಜಾರಿಗೊಳಿಸಿದರು.
ಪ್ರಜ್ಞಾ ಠಾಕೂರ್ ಅವರಿಗೆ ಅನಾರೋಗ್ಯವಿರುವುದರಿಂದ ವಿಚಾರಣೆಗೆ ಹಾಜರಾಗಲು ಸೂಕ್ತ ಸಮಯಾವಕಾಶವನ್ನು ಒದಗಿಸಬೇಕು ಎಂದು ಅವರ ಪರ ವಕೀಲರು ವಿಶೇಷ NIA ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಜೂನ್ ತಿಂಗಳಿನಿಂದ ಪ್ರಜ್ಞಾ ಠಾಕೂರ್ ವಿಚಾರಣೆಗೆ ಹಾಜರಾಗಿಲ್ಲ ಎಂಬುದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು.
ಅಸ್ವಸ್ಥತೆ ಹಾಗೂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ಆಧಾರದಲ್ಲಿ ವಿಚಾರಣೆಗೆ ವಿನಾಯತಿ ಕೋರಿ ಪ್ರಜ್ಞಾ ಠಾಕೂರ್ ಸಲ್ಲಿಸಿದ್ದ ಅರ್ಜಿಗಳನ್ನು ಕಾಲಕಾಲಕ್ಕೆ ಪರಿಗಣಿಸಲಾಗಿದೆ ಎಂದು ವಿಶೇಷ ನ್ಯಾಯಾಧೀಶರು ಹೇಳಿದರು.
“ಇಂದು, ಆಕೆ ಆಯುರ್ವೇದ ಚಿಕಿತ್ಸೆಗೊಳಗಾಗುತ್ತಿದ್ದಾರೆ ಎಂದು ಹೇಳುವ ವೈದ್ಯಕೀಯ ಪ್ರಮಾಣ ಪತ್ರದ ನಕಲನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ. ಆದರೆ, ಮೂಲ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿಲ್ಲ” ಎಂದು ಅಭಿಪ್ರಾಯ ಪಟ್ಟ ನ್ಯಾಯಾಲಯ, ಪ್ರಜ್ಞಾ ಠಾಕೂರ್ ಅರ್ಜಿಯನ್ನು ವಜಾಗೊಳಿಸಿತು.
ಸೆಪ್ಟೆಂಬರ್ 29, 2008ರಂದು ಮುಂಬೈನಿಂದ 200 ಕಿಮೀ ದೂರದಲ್ಲಿರುವ ಮಾಲೇಗಾಂವ್ ನ ಮಸೀದಿಯೊಂದರ ಬಳಿ ಸುಧಾರಿತ ಸ್ಫೋಟಕಗಳು ತುಂಬಿದ್ದ ಮೋಟಾರ್ ಸೈಕಲ್ ಒಂದು ಸ್ಫೋಟಗೊಂಡು, ಆರು ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಸ್ಫೋಟದ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಹಾಗೂ ಇನ್ನಿತರ ಐದು ಮಂದಿಯ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
2011ರಲ್ಲಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದ ತನಿಖೆಗೆ ಹಸ್ತಾಂತರಿಸುವುದಕ್ಕೂ ಮುನ್ನ, ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಈ ಕುರಿತು ತನಿಖೆ ನಡೆಸುತ್ತಿತ್ತು.