ಮಾಲೆಗಾಂವ್ ಸ್ಫೋಟ ಪ್ರಕರಣ: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅನುಪಸ್ಥಿತಿಯಿಂದ ವಿಚಾರಣೆಗೆ ಅಡ್ಡಿ; ವೈದ್ಯಕೀಯ ವರದಿ ಕೇಳಿದ ನ್ಯಾಯಾಲಯ
ಪ್ರಜ್ಞಾ ಸಿಂಗ್ ಠಾಕೂರ್ | Photo: PTI
ಹೊಸದಿಲ್ಲಿ: ಭೋಪಾಲದ ಬಿಜೆಪಿ ಸಂಸದೆ ಹಾಗೂ 2008 ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ವಿಚಾರಣೆಗೆ ಹಾಜರಾಗದೇ ಇರುವುದು ವಿಚಾರಣೆಯ ಪ್ರಗತಿಗೆ ಅಡ್ಡಿಯಾಗಿದೆ ಎಂದು ಹೇಳಿರುವ ವಿಶೇಷ ನ್ಯಾಯಾಲಯ, ಸಂಸದೆಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎನ್ಐಎಗೆ ಹೇಳಿದೆ.
ವಿಶೇಷ ನ್ಯಾಯಾಲಯವು ಈ ಪ್ರಕರಣದ ಏಳು ಆರೋಪಿಗಳ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಸುತ್ತಿದೆ.
ಆರೋಗ್ಯ ಕಾರಣಗಳನ್ನು ಮುಂದೊಡ್ಡಿ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಬುಧವಾರ ಪ್ರಜ್ಞಾ ಠಾಕೂರ್ ತಮ್ಮ ವಕೀಲರ ಮೂಲಕ ಕೋರಿದ್ದರು. ಆಕೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಹಾಗೂ ಆಕೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆಂದು ಆಕೆಯ ವಕೀಲರು ನ್ಯಾಯಾಲಯಕ್ಕೆ ಹೇಳಿದರು.
ಪ್ರಜ್ಞಾ ಠಾಕೂರ್ ಅವರು ಹಾಜರಾಗದೇ ಇದ್ದುದರಿಂದ ಮಾರ್ಚ್ 11ರಂದು ನ್ಯಾಯಾಲಯವು ಅವರಿಗೆ ಜಾಮೀನು ಪಡೆಯಬಹುದಾದ ವಾರಂಟ್ ಜಾರಿಗೊಳಿಸಿತ್ತು. ಮಾರ್ಚ್ 22ರಂದು ಆಕೆ ನ್ಯಾಯಾಲಯಕ್ಕೆ ಹಾಜರಾದ ನಂತರ ಜಾಮೀನು ರದ್ದುಗೊಳಿಸಲಾಯಿತು.
ಪ್ರಜ್ಞಾ ಮಾರ್ಚ್ 22ರಂದು ಹಾಜರಾದಾಗ ಆಕೆಯ ವೈದ್ಯಕೀಯ ಸ್ಥಿತಿಯನ್ನು ಪರಿಗಣಿಸಿ ಆಕೆಗೆ ಬೇಗ ನಿರ್ಗಮಿಸಲು ಅನುಮತಿಸಲಾಗಿತ್ತು.
ಆಕೆಯ ಹೇಳಿಕೆ ದಾಖಲಿಸಲು ಆಕೆಯ ಉಪಸ್ಥಿತಿ ಅಗತ್ಯವಿದೆ ಎಂದು ನ್ಯಾಯಾಧೀಶರು ಬುಧವಾರ ಹೇಳಿದರು.