ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ಅಂತ್ಯವಾಗುತ್ತದೆಯೇ?: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ | PC : NDTV
ಮಹು(ಮ.ಪ್ರ): ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಕೆಲವು ಹಿರಿಯ ಸಂತರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಬೆನ್ನಿಗೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬಡತನವು ಅಂತ್ಯಗೊಳ್ಳುತ್ತದೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರು ಕ್ಯಾಮೆರಾಗಳಿಗೆ ಪೋಸ್ ನೀಡಲು ಸ್ನಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.
ಮಧ್ಯಪ್ರದೇಶದ ಮಹು ಪಟ್ಟಣದಲ್ಲಿ ‘ಜೈ ಬಾಪು,ಜೈ ಭೀಮ್,ಜೈ ಸಂವಿಧಾನ’ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಬಿಜೆಪಿ ನಾಯಕರು ಕ್ಯಾಮೆರಾಗಳಲ್ಲಿ ಚೆನ್ನಾಗಿ ಕಂಡು ಬರುವವರೆಗೂ ಸ್ನಾನ ಮಾಡುತ್ತಿದ್ದಾರೆ ಎಂದರು
‘ನರೇಂದ್ರ ಮೋದಿಯವರ ಸುಳ್ಳು ಭರವಸೆಗಳ ಬಲೆಗೆ ಬೀಳಬೇಡಿ. ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬಡತನವು ಅಂತ್ಯಗೊಳ್ಳುತ್ತದೆಯೇ? ಅದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆಯೇ? ನಾನು ಯಾರದೇ ನಂಬಿಕೆಯನ್ನು ಪ್ರಶ್ನಿಸಲು ಬಯಸುವುದಿಲ್ಲ,ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾದರೆ ಅದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದ ಖರ್ಗೆ, ಮಕ್ಕಳು ಹಸಿವೆಯಿಂದ ಸಾಯುತ್ತಿರುವ, ಶಾಲೆಗೆ ಹೋಗದಿರುವ, ಕಾರ್ಮಿಕರಿಗೆ ತಮ್ಮ ಬಾಕಿ ಸಿಗದಿರುವ ಈ ಸಮಯದಲ್ಲಿ ಬಿಜೆಪಿಯವರು ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದಾರೆ ಮತ್ತು ಗಂಗಾನದಿಯಲ್ಲಿ ಸ್ನಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕುಟುಕಿದರು.
‘ಇಂತಹ ಜನರಿಂದ ದೇಶಕ್ಕೆ ಪ್ರಯೋಜನವಿಲ್ಲ. ನಮ್ಮ ನಂಬಿಕೆಯು ದೇವರಲ್ಲಿದೆ. ಜನರು ಪ್ರತಿ ದಿನ ತಮ್ಮ ಮನೆಗಳಲ್ಲಿ ಪೂಜೆ ಮಾಡುತ್ತಾರೆ. ಎಲ್ಲ ಮಹಿಳೆಯರೂ ಪೂಜೆಯನ್ನು ಮಾಡಿದ ಬಳಿಕವೇ ತಮ್ಮ ಮನೆಗಳಿಂದ ಹೊರಗೆ ಹೋಗುತ್ತಾರೆ. ಆದರೆ ಧರ್ಮದ ಹೆಸರಿನಲ್ಲಿ ಬಡವರು ಶೋಷಣೆಗೆ ಒಳಗಾಗುತ್ತಿರುವುದು ನಮ್ಮ ಸಮಸ್ಯೆಯಾಗಿದೆ’ ಎಂದರು.