‘ಬೇಟಿ ಬಚಾವೊ, ಬೇಟಿ ಪಢಾವೊ’ ಯೋಜನೆಯಿಂದ 455 ಕೋಟಿ ರೂ. ನಾಪತ್ತೆ | ಮೋದಿ ಸರಕಾರದ ಸುಳ್ಳುಗಳನ್ನು ಬಯಲು ಮಾಡಿದ RTI ಮಾಹಿತಿ: ಮಲ್ಲಿಕಾರ್ಜನ ಖರ್ಗೆ

ಮಲ್ಲಿಕಾರ್ಜನ ಖರ್ಗೆ | PC : PTI
ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರದ ‘ಬೇಟಿ ಬಚಾವೊ, ಬೇಟಿ ಪಢಾವೊ’ ಯೋಜನೆಯಿಂದ 455 ಕೋಟಿ ರೂ. ನಾಪತ್ತೆಯಾಗಿದ್ದು, ಆಡಳಿತಾರೂಢ ಕೇಂದ್ರ ಸರಕಾರದ ಸುಳ್ಳುಗಳನ್ನು RTI ಮಾಹಿತಿ ಬಯಲು ಮಾಡಿದೆ ಎಂದು ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಮೋದಿ ಸರಕಾರದ ‘ಬೇಟಿ ಬಚಾವೊ, ಬೇಟಿ ಪಢಾವೊ’ ಯೋಜನೆಯಿಂದ 455 ಕೋಟಿ ರೂ. ನಾಪತ್ತೆಯಾಗಿರುವುದು RTI ಮಾಹಿತಿಯಿಂದ ಬಯಲಾಗಿದೆ” ಎಂದು ಹೇಳಿದ್ದಾರೆ.
“ಬಿಜೆಪಿಯ ‘ಮಹಿಳೆಯರ ಮೇಲಿನ ದಾಳಿ ಇನ್ನು ಸಾಕು’ ಎಂಬ ಜಾಹೀರಾತನ್ನು ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯ ಆಡಳಿತ ಹಾಗೂ ಕೆಲವೊಮ್ಮೆ ಬಿಜೆಪಿ ಗೂಂಡಾಗಳಿಂದ ಕಿರುಕುಳಕ್ಕೊಳಗಾಗಿರುವ ಮಹಿಳೆಯರ ಆಕ್ರಂದನ ಅಣಕವಾಡುತ್ತಿದೆ” ಎಂದು ಅವರು ಟೀಕಿಸಿದ್ದಾರೆ.
“ಅದು ಇತ್ತೀಚೆಗೆ ಪುಣೆಯ ಸರಕಾರಿ ಬಸ್ ಒಂದರಲ್ಲಿ ಅತ್ಯಾಚಾರಕ್ಕೀಡಾಗಿರುವ ಮಹಿಳೆ ಇರಲಿ ಅಥವಾ ಮಣಿಪುರ ಮತ್ತು ಹಥ್ರಾಸ್ ನ ನಮ್ಮ ಪುತ್ರಿಯರಿರಲಿ ಅಥವಾ ಮಹಿಳಾ ಒಲಿಂಪಿಕ್ ಚಾಂಪಿಯನ್ ಗಳಿರಲಿ, ಬಿಜೆಪಿ ಆಡಳಿತದಲ್ಲಿ ಯಾವ ಮಹಿಳೆಯೂ ಸುರಕ್ಷಿತವಾಗಿ ಉಳಿದಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರಕಾರ ಬಚ್ಚಿಡುತ್ತಿರುವ ಅಂಕಿ-ಸಂಖ್ಯೆ ಸೇರಿದಂತೆ ‘ಬೇಟಿ ಬಚಾವೊ, ಬೇಟಿ ಪಢಾವೊ’ ಯೋಜನೆಯ ಬಗ್ಗೆ ನಾನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದೆ ಎಂದೂ ಅವರು ಹೇಳಿದ್ದಾರೆ.
“ಇಂದು RTI ಮಾಹಿತಿಗಳು ಮೋದಿ ಸರಕಾರದ ಸುಳ್ಳುಗಳನ್ನು ಮತ್ತೊಮ್ಮೆ ಬಯಲಾಗಿಸಿವೆ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.