ರಾಜ್ಯಸಭೆಯಲ್ಲಿ ಭಾವುಕರಾದ ಮಲ್ಲಿಕಾರ್ಜುನ ಖರ್ಗೆ
ತಮ್ಮ ವಿರುದ್ಧದ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ (PTI)
ಹೊಸದಿಲ್ಲಿ: ರಾಜ್ಯಸಭೆಯಲ್ಲಿಂದು ಭಾವುಕರಾದ ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ರಾಜಕೀಯ ಪಯಣದ ಕುರಿತು ಬಿಜೆಪಿ ಸಂಸದ ಘನಶ್ಯಾಮ್ ತಿವಾರಿ ನೀಡಿರುವ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ ಘಟನೆ ನಡೆಯಿತು.
ಕಲಾಪ ಪ್ರಾರಂಭಗೊಳ್ಳುತ್ತಿದ್ದಂತೆಯೆ, ಪಟ್ಟಿ ಮಾಡಲಾದ ದಾಖಲೆಗಳನ್ನು ಸದನದಲ್ಲಿ ಮಂಡಿಸಿದ ಮಲ್ಲಿಕಾರ್ಜುನ ಖರ್ಗೆ, ತಮ್ಮ ಇಡೀ ಕುಟುಂಬವು ರಾಜಕಾರಣದಲ್ಲಿದೆ ಎಂಬ ತಿವಾರಿಯವರ ಹೇಳಿಕೆಯತ್ತ ಬೊಟ್ಟು ಮಾಡಿದರು.
“ಅವರು (ತಿವಾರಿ) ಕುಟುಂಬ ರಾಜಕಾರಣದ ಕುರಿತು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಬೇಕು ಎಂದು ನಾನು ಮನವಿ ಮಾಡುತ್ತೇನೆ” ಎಂದು ಖರ್ಗೆ ಕೋರಿದರು.
ರಾಜಕಾರಣದಲ್ಲಿ ನಾನು ಮೊದಲ ತಲೆಮಾರಿನವನು ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷ ಸೇರಿದ ನಂತರದ ತಮ್ಮ ರಾಜಕೀಯ ಪಯಣದ ಕುರಿತು ಸದನಕ್ಕೆ ವಿವರಗಳನ್ನು ನೀಡಿದರು.
ಖರ್ಗೆ ಮಾತಿಗೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಜಗದೀಪ್ ಧನಕರ್, ತಿವಾರಿ ಆ ಹೇಳಿಕೆ ನೀಡಿದಾಗ ನಾನೂ ಸದನದಲ್ಲಿ ಉಪಸ್ಥಿತನಿದ್ದೆ. ಅವರು ನಿಮ್ಮ ವಿರುದ್ಧ ಯಾವುದೇ ತಪ್ಪು ಹೇಳಿಕೆ ನೀಡಿರುವುದು ಕಂಡು ಬರಲಿಲ್ಲ ಎಂದು ಹೇಳಿದರು.
ಹೀಗಿದ್ದೂ, ತಕ್ಷಣವೇ ಕಲಾಪದ ದಾಖಲೆಗಳನ್ನು ಪರಿಶೀಲಿಸಲಾಗುವುದು ಹಾಗೂ ಖರ್ಗೆ ಅವರಿಗೆ ನೋವುಂಟು ಮಾಡಿರುವ ಯಾವುದೇ ಪದಗಳು ಕಡತದಲ್ಲಿರದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.