ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತ ʼಕಪ್ಪು ಪತ್ರʼ ಬಿಡುಗಡೆಗೊಳಿಸಿದ ಕಾಂಗ್ರೆಸ್
Photo: ANI
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಕೇಂದ್ರ ಸರ್ಕಾರದ ವೈಫಲ್ಯಗಳ ಕುರಿತ ʼಕಪ್ಪು ಪತ್ರʼ ಬಿಡುಗಡೆಗೊಳಿಸಿದ್ದಾರೆ ಹಾಗೂ ಸರ್ಕಾರ ಆರ್ಥಿಕತೆಗೆ ಸಂಬಂಧಿಸಿದಂತೆ ಸುಧಾರಣೆ ತರಲು ವಿಫಲವಾಗಿದೆ ಎಂದು ಹೇಳಿದ್ದಾರೆ.
“10 ಸಾಲ್ ಅನ್ಯಾಯ್ ಕಾಲ್” (10 ವರ್ಷ ಅನ್ಯಾಯದ ಕಾಲ) ಎಂಬ ಶೀರ್ಷಿಕೆಯ ಈ ಕಪ್ಪು ಪತ್ರವು ನಿರುದ್ಯೋಗ, ಬೆಲೆಯೇರಿಕೆ ಮತ್ತು ರೈತರ ಸಮಸ್ಯೆ ಪರಿಹರಿಸಲು ವಿಫಲವಾಗಿದೆ ಎಂದು ಆರೋಪಿಸಿದೆ.
“ಅವರು ಸಂಸತ್ತಿನಲ್ಲಿ ಮಾತನಾಡಿದಾಗಲೆಲ್ಲಾ ತಮ್ಮ ಸಾಧನೆಗಳ ಬಗ್ಗೆಯೇ ಹೇಳಿಕೊಳ್ಳುತ್ತಾರೆ ಆದರೆ ವೈಫಲ್ಯಗಳ ಬಗ್ಗೆ ಮಾತನಾಡುವುದಿಲ್ಲ. ನಮಗೂ ಆ ಬಗ್ಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ಆರ್ಥಿಕತೆ ನಿಭಾಯಿಸಲು ಅವರು ವಿಫಲರಾಗಿದ್ಧಾರೆ. ದೇಶದಲ್ಲಿ ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ, ಆದರೆ ಅವರು ಅದರ ಬಗ್ಗೆ ಮಾತನಾಡುವುದಿಲ್ಲ,” ಎಂದು ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
“ನೆಹರೂ ಅವರ ಅವಧಿಯಲ್ಲಿ ಸ್ಥಾಪಿತಗೊಂಡ ಹಾಗೂ ಉದ್ಯೋಗಗಳನ್ನು ಒದಗಿಸಿದ ಸಾರ್ವಜನಿಕ ರಂಗದ ಸಂಸ್ಥೆಗಳ ಬಗ್ಗೆ ಪ್ರಧಾನಿ ಮಾತನಾಡುವುದಿಲ್ಲ, ಅವರು ಇಂದಿರಾ ಜೀ, ರಾಜೀವ್ ಜೀ ಮತ್ತು ನೆಹರೂ ಜೀ ಅವರನ್ನು ನಿಂದಿಸುತ್ತಾರೆ, ಆದರೆ ಮನ್ರೇಗಾ ಕುರಿತು ಮಾತನಾಡುತ್ತಾರೆ, ಆದರೆ ಅದಕ್ಕಾಗಿ ಹಣ ಬಿಡುಗಡೆಗೊಳಿಸದೆ ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗಿದೆ,” ಎಂದರು.
“ನಮ್ಮ 411 ಶಾಸಕರನ್ನು ಬಿಜೆಪಿ ಕಳೆದ ಕೆಲ ವರ್ಷಗಳಲ್ಲಿ ಪಡೆದುಕೊಂಡಿದೆ. ಇದಕ್ಕಾಗಿ ಅವರು ಎಷ್ಟು ಹಣ ಖರ್ಚು ಮಾಡಿದ್ದಾರೆಂದು ತಿಳಿದಿಲ್ಲ. ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಿದ ನಂತರ ನಮಗೆ ನಿಂದನಾತ್ಮಕ/ಬೆದರಿಕೆ ಕರೆಗಳು ಬಂದವು. ನಂತರ ನಾವು ಪೊಲೀಸ್ ದೂರು ದಾಖಲಿಸಿದೆವು. ಇವುಗಳ ಬಗ್ಗೆ ಪರಿವೆಯಿಲ್ಲ. ಈ ಮಟ್ಟಕ್ಕೆ ಬಹಳ ಕಷ್ಟು ಪಟ್ಟು ಬೆಳೆದು ನಿಂತ ಪರಿಶಿಷ್ಟ ಜಾತಿ ನಾಯಕ ನಾನು,” ಎಂದು ಅವರು ಹೇಳಿದರು.