ಮುಸ್ಲಿಂ ಶಾಸಕರನ್ನು ಹೊರಗೆಸೆಯುವ ಹೇಳಿಕೆ | ಬಿಜೆಪಿ ʼನಕಲಿ ಹಿಂದೂ ಧರ್ಮʼವನ್ನು ಆಮದು ಮಾಡಿಕೊಳ್ಳುತ್ತಿದೆ: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ | PC: PTI
ಕೋಲ್ಕತಾ: ಬಿಜೆಪಿ ರಾಜ್ಯಕ್ಕೆ ‘‘ನಕಲಿ ಹಿಂದೂ ಧರ್ಮ’’ ವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಎಂಸಿಯಲ್ಲಿರುವ ಮುಸ್ಲಿಂ ಶಾಸಕರನ್ನು ರಾಜ್ಯ ವಿಧಾನ ಸಭೆಯಿಂದ ಹೊರಗೆಸೆಯಲಾಗುವುದು ಎಂದು ಪ್ರತಿಪಕ್ಷದ ನಾಯಕ ಸುವೇಂಧು ಅಧಿಕಾರಿ ಹೇಳಿದ ಒಂದು ದಿನದ ಬಳಿಕ ಮಮತಾ ಬ್ಯಾನರ್ಜಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ನಾಗರಿಕರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸದನದಲ್ಲಿ ಈ ವಿಷಯದ ಕುರಿತು ಮಾತನಾಡಿದ ಬ್ಯಾನರ್ಜಿ, ನಿಮ್ಮ ಆಮದು ಮಾಡಿಕೊಂಡ ಹಿಂದೂ ಧರ್ಮ ವೇದಗಳಿಂದಾಗಲಿ, ನಮ್ಮ ಋಷಿಗಳಿಂದಾಗಲಿ ಬೆಂಬಲಿತವಾಗಿಲ್ಲ. ನಾಗರಿಕರಾಗಿ ಮುಸ್ಲಿಮರ ಹಕ್ಕುಗಳನ್ನು ನೀವು ಹೇಗೆ ನಿರಾಕರಿಸಲು ಸಾಧ್ಯ ? ಇದು ಮೋಸ ಅಲ್ಲದೆ, ಬೇರೇನೂ ಅಲ್ಲ. ನೀವು ನಕಲಿ ಹಿಂದೂ ಧರ್ಮವನ್ನು ಆಮದು ಮಾಡಿಕೊಳ್ಳುತ್ತಿದೀರಿ ಎಂದು ಹೇಳಿದರು.
ಬಿಜೆಪಿ ಅಲ್ಪಸಂಖ್ಯಾತರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯ ಕುರಿತಂತೆ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ನನಗೆ ಹಿಂದೂ ಧರ್ಮವನ್ನು ಸಂರಕ್ಷಿಸುವ ಹಕ್ಕು ಇದೆ. ಆದರೆ, ನಿಮ್ಮ ರೀತಿಯಲ್ಲಿ ಅಲ್ಲ. ದಯವಿಟ್ಟು ಹಿಂದೂ ಕಾರ್ಡ್ ಅನ್ನು ಚಲಾಯಿಸಬೇಡಿ ಎಂದು ಅವರು ಹೇಳಿದ್ದಾರೆ.
ನಿಮ್ಮ ನಾಯಕರ ಹೇಳಿಕೆಗಳ ಬಗ್ಗೆ ನನಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇದ್ದರೆ, ಸದನದ ಹೊರಗೆ ನಮ್ಮ ನಾಯಕರ ಹೇಳಿಕೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ? ನಮ್ಮ ನಂಬಿಕೆಗಳನ್ನು ಸಮರ್ಥಿಸಿಕೊಳ್ಳುವ ಹಕ್ಕು ನಮಗಿದೆ ಎಂದು ಅವರು ಹೇಳಿದ್ದಾರೆ.
ಏಕತೆಯ ಪ್ರಾಮುಖ್ಯತೆ ಕುರಿತು ಮಾತನಾಡಿದ ಬ್ಯಾನರ್ಜಿ, ನಮ್ಮದು ಜಾತ್ಯತೀತ, ಬಹುತ್ವವಾದಿ ದೇಶ. ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಅನುಸರಿಸುವ ಹಕ್ಕಿದೆ. ಅಲ್ಪ ಸಂಖ್ಯಾತರನ್ನು ರಕ್ಷಿಸುವುದು ಬಹುಸಂಖ್ಯಾತರ ಕರ್ತವ್ಯ. ನಾವು ನಮ್ಮ ದೇಶದ ಸಾರ್ವಭೌಮತೆ ಹಾಗೂ ಜಾತ್ಯತೀತತೆಯನ್ನು ರಕ್ಷಿಸಬೇಕು ಎಂದರು.