ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡವರಿಗೆ ಪರ್ಯಾಯ ಕಾರ್ಡ್ ಒದಗಿಸಲು ಮುಂದಾದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Photo: PTI)
ಕೊಲ್ಕತ್ತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡವರಿಗೆ ವಿಶೇಷ ಪರ್ಯಾಯ ಕಾರ್ಡ್ಗಳನ್ನು ಒದಗಿಸಲು ಸರಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಆಧಾರ್ ಕಾರ್ಡ್ ನಿಷ್ಕ್ರಿಯಗೊಂಡವರಿಗಾಗಿ ದೂರು ನಿವಾರಣಾ ಪೋರ್ಟಲ್ ಅನ್ನು ಶೀಘ್ರ ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕೆಲವರ ಆಧಾರ್ ಕಾರ್ಡ್ಗಳನ್ನು ಉದ್ದೇಶಪೂರ್ವಕವಾಗಿ ರದ್ದುಗೊಳಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ ನಂತರ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ದೊರೆತ ತೀಕ್ಷ್ಣ ಉತ್ತರದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ.
ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿರುವುದು ರಾಜ್ಯದ ಪರಿಶಿಷ್ಟ ಜಾತಿ/ವರ್ಗಗಳು ಮತ್ತು ಒಬಿಸಿ ಸಮುದಾಯಗಳನ್ನು ಬಾಧಿಸಿದೆ, ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ವಿಶಿಷ್ಟ ಗುರುತು ಪ್ರಾಧಿಕಾರ ಏಕಪಕ್ಷೀಯವಾಗಿ ಕಾರ್ಡ್ಗಳನ್ನು ರದ್ದುಗೊಳಿಸಿದೆ, ಈ ಅಸಮರ್ಥನೀಯ ಕ್ರಮದ ಕುರಿತಂತೆ ಪ್ರಧಾನಿಯಿಂದ ವಿವರಣೆ ಕೇಳುತ್ತಿರುವುದಾಗಿ ಮಮತಾ ಹೇಳಿದ್ದಾರೆ.