ನಾಗರಿಕ ಸ್ವಯಂಸೇವಕರು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರಿಗೆ ದುರ್ಗಾ ಪೂಜೆ ಬೋನಸ್ ಘೋಷಿಸಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | Photo: PTI
ಕೋಲ್ಕತ್ತಾ: ಪಶ್ಚಿಮ ಬಂಗಾಳ ಪೊಲೀಸ್ ಮತ್ತು ಕೋಲ್ಕತ್ತಾ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಡಿ ನೇಮಕಗೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೂ. 5,300 ದುರ್ಗಾ ಪೂಜೆ ಬೋನಸ್ ಅನ್ನು ಘೋಷಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಕೆಲವು ರೋಗಗ್ರಸ್ತ ಪ್ರಚೋದಿತ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಕೋಲ್ಕತ್ತಾ ಹಾಗೂ ಪಶ್ಚಿಮ ಬಂಗಾಳದ ವಿವಿಧ ಶ್ರೇಣಿಯ ಪೊಲೀಸರ ನಡುವೆ ವಿಭಜನೆ ಮತ್ತು ಹಗೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ, ಕೋಲ್ಕತ್ತಾ ಪೊಲೀಸರಂತೆಯೆ ಪಶ್ಚಿಮ ಬಂಗಾಳ ಪೊಲೀಸರೂ ರೂ. 5,300 ಮೊತ್ತದ ದುರ್ಗಾ ಪೂಜೆ ಬೋನಸ್ ಅನ್ನು ಪಡೆಯಲಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
“ಇವರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರೂ ರೂ. 5,300 ಮೊತ್ತದ ದುರ್ಗಾ ಪೂಜೆ ಬೋನಸ್ ಪಡೆಯಲಿದ್ದಾರೆ. ಕ್ಷೇತ್ರಕಾರ್ಯ ಮಾಡುವ ಈ ಎಲ್ಲ ನನ್ನ ಸಹೋದ್ಯೋಗಿಗಳಿಗೂ ದುರ್ಗಾ ಪೂಜೆಯ ಶುಭಾಶಯಗಳು” ಎಂದು ಅವರು ಹೇಳಿದ್ದಾರೆ.